ಭಾಗಮಂಡಲಕ್ಕೆ ಮೇಲುಸೇತುವೆ ಭಾಗ್ಯ : ಜ.9 ರಂದು ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ

Update: 2018-01-06 11:06 GMT
ಮಿಟ್ಟು ಚಂಗಪ್ಪ

ಮಡಿಕೇರಿ,ಜ.6 :ಕೊಡಗಿನ ಕುಲದೇವತೆ ಕಾವೇರಿಯ ಭಕ್ತರು ಹಾಗೂ ಭಾಗಮಂಡಲ ಸುತ್ತಮುತ್ತಲಿನ ಪ್ರದೇಶದ ಗ್ರಾಮಸ್ಥರ ಬಹುಕಾಲದ ಬೇಡಿಕೆ ಪೂರ್ಣಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಮೇಲುಸೇತುವೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮಿಟ್ಟು ಚಂಗಪ್ಪ ತಿಳಿಸಿದ್ದಾರೆ.

ಜಿಲ್ಲಾ ಉಸ್ತವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಜ.9 ರಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಾ ಮಳೆಗಾಲದಲ್ಲಿ ತ್ರಿವೇಣಿ ಸಂಗಮ ಉಕ್ಕಿ ಹರಿದು ಭಾಗಮಂಡಲದ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡು ದ್ವೀಪದಂತ್ತಾಗುತ್ತವೆ.  ಗ್ರಾಮಸ್ಥರು ತಿಂಗಳುಗಳ ಕಾಲ ಸಮಾಜದ ಸಂಪರ್ಕ ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗುತ್ತಾರೆ. ಈ ಪರಿಸ್ಥಿತಿ ಕಳೆದ ಅನೇಕ ವರ್ಷಗಳಿಂದ ಭಾಗಮಂಡಲವನ್ನು ಕಾಡುತ್ತಿದೆ, ಮಾತ್ರವಲ್ಲದೆ ಕಾವೇರಿ ಭಕ್ತರು ಕೂಡ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವುದಕ್ಕೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದೀಗ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿರುವ ರಾಜ್ಯ ಸರಕಾರ ಮೇಲು ಸೇತುವೆ ನಿರ್ಮಿಸಲು ಮುಂದಾಗಿದೆ ಎಂದು ಮಿಟ್ಟುಚಂಗಪ್ಪ ತಿಳಿಸಿದ್ದಾರೆ.

2014 ರ ಜುಲೈ ತಿಂಗಳಿನಲ್ಲಿ ತ್ರಿವೇಣಿ ಸಂಗಮ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಸಂದರ್ಭ ತಾವು ಸೇರಿದಂತೆ ಮಾಜಿ ಸಚಿವರಾದ ದಿ.ಎಂ.ಎಂ.ನಾಣಯ್ಯ, ಈಗಿನ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ದಿ.ಬಿ.ಟಿ.ಪ್ರದೀಪ್, ಕರುಂಬಯ್ಯ, ಮನೆಯಪಂಡ ಪೊನ್ನಪ್ಪ, ಭಾಗಮಂಡಲ ವಲಯಾಧ್ಯಕ್ಷರಾಗಿದ್ದ ಸುನೀಲ್ ಪತ್ರಾವೊ, ದೇವಗೊಂಡಿ ಹರ್ಷ, ರವಿಹೆಬ್ಬಾರ್ ಹಾಗೂ ಭಾಗಮಂಡಲದ ನಾಗರೀಕರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಗಮನ ಸೆಳೆದು ಮೇಲುಸೇತುವೆ ನಿರ್ಮಾಣಕ್ಕಾಗಿ ಮನವಿ ಮಾಡಿಕೊಂಡಿದ್ದರು.

ಸಚಿವರಾದ ಜಾರ್ಜ್ ಅವರು ಜುಲೈ 13, 2014ರಂದು ಭಾಗಮಂಡಲಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿದರು. ಭಾರೀ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್ ಅವರೊಂದಿಗೆ  ನಿರಂತರವಾಗಿ ಮಾತುಕತೆ ನಡೆಸಿ ಸುಮಾರು 30 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪುಗೊಂಡಿತು. ನಂತರ ಉಸ್ತುವಾರಿ ಸಚಿವರಾಗಿ ಬಂದ ದಿನೇಶ್ ಗುಂಡೂರಾವ್ ಹಾಗೂ ಈಗಿನ ಉಸ್ತವಾರಿ ಸಚಿವರಾದ ಎಂ.ಆರ್.ಸೀತರಾಂ ಅವರ ಪ್ರಮಾಣಿಕ ಪ್ರಯತ್ನದಿಂದ ಇದೀಗ ಯೋಜನೆಗೆ ಚಾಲನೆ ನೀಡುವ ಕಾಲ ಕೂಡಿ ಬಂದಿದೆ ಎಂದು ಮಿಟ್ಟು ಚಂಗಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಕಾಳಜಿ ಶ್ಲಾಘನಾರ್ಹವೆಂದು ತೃಪ್ತಿವ್ಯಕ್ತಪಡಿಸಿರುವ ಅವರು ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳು ಭಕ್ತಿಭಾವದ ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕೆ ಹೊರತು ಯಾವುದೇ ಕಾರಣಕ್ಕೂ ಪ್ರವಾಸಿತಾಣವಾಗಿ ಬದಲಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಜೀವನದಿ ಕಾವೇರಿಯ ಪಾವಿತ್ರ್ಯತೆಯನ್ನು ಕಾಪಾಡಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಮಡಿಕೇರಿಗೆ ಬಂದಾಗ ಮನವಿ ಮಾಡಿಕೊಳ್ಳಗುವುದು ಎಂದು ಮಿಟ್ಟುಚಂಗಪ್ಪ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News