ಯುವಜನರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಮಹತ್ವ ನೀಡಿ:ಟಿ.ಬಿ.ಜಯಚಂದ್ರ

Update: 2018-01-06 11:40 GMT

ತುಮಕೂರು,ಜ.06: ವಿದ್ಯಾರ್ಥಿಗಳಲ್ಲಿ ಹಾಗೂ ನಿರುದ್ಯೋಗಿಗಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಲು ಸರಕಾರ ಮಹತ್ವವನ್ನು ನೀಡಿದ್ದು, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕಾನೂನು ಸಂಸದೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು,ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕ-ಯುವತಿಯರಲ್ಲಿ ಕೌಶಲ್ಯವನ್ನು ವೃದ್ಧಿಸಲು,ಉದ್ದಿಮೆಗಳಲ್ಲಿ ಕೆಲಸ ದೊರಕುವ ನಿಟ್ಟಿನಲ್ಲಿ ಅವಶ್ಯಕವಾದ ತರಬೇತಿಗಳನ್ನು ನೀಡಲು ಸರಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಇಂದು ಉದ್ಯೋಗಾವಕಾಶದ ಕೊರತೆ ಇಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹಾಗೂ ಉದ್ದಿಮೆಗಳಿಗೆ ಪೂರಕವಾದ ವಿದ್ಯಾಭ್ಯಾಸದ ಕೊರತೆ ಕಾಡುತ್ತಿದ್ದು,ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಅಗತ್ಯ ತರಬೇತಿ ಪಡೆದುಕೊಂಡರೆ ಉದ್ಯೋಗ ಸಿಗುತ್ತದೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.

ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್, ನಿರುದ್ಯೋಗದ ಸಮಸ್ಯೆ ಎಲ್ಲ ಕಡೆ ಆಡಳಿತ ನಡೆಸುವವರನ್ನು ಕಾಡುತ್ತಿದ್ದು, ಉದ್ಯೋಗ ನೀಡಲು ಕೌಶಲ್ಯದ ಕೊರತೆ ಇದೆ ಎಂದು ಉದ್ದಿಮೆದಾರರು ಹೇಳುತ್ತಿದ್ದಾರೆ. ಶಿಕ್ಷಣ ಹಾಗೂ ಉದ್ದಿಮೆ, ಕೈಗಾರಿಕೆಗಳಿಗೂ ಸಂಬಂಧವಿಲ್ಲದಂತಾಗಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕೌಶಲ್ಯಾಭಿವೃದ್ಧಿ ನಿಗಮವು ಉತ್ತಮ ಕೆಲಸವನ್ನು ಮಾಡುತ್ತಿದ್ದು, ಇದುವರೆಗೆ 5 ಲಕ್ಷ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ. ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ತರಬೇತಿಯನ್ನು ಪಡೆಯಲು 7 ಲಕ್ಷ 60 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.ಅವರು ಸೂಕ್ತ ತರಬೇತಿಯನ್ನು ಪಡೆದುಕೊಂಡಿರುವುದರಿಂದ ಉದ್ಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ 136 ಕಂಪನಿಗಳಿಗೆ ಸಾವಿರಾರು ಉತ್ಸಾಹಿ ತರುಣ-ತರುಣಿಯರು ಉದ್ಯೋಗಕ್ಕೆ ಸಂದರ್ಶನ ಎದುರಿಸುತ್ತಿದ್ದಾರೆ . ಭಾರತ ತಂತ್ರಜ್ಞಾನ ಆಧಾರಿತ ಮಾನವ ಸಂಪನ್ಮೂಲಕ್ಕೆ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಹೊರದೇಶಗಳಲ್ಲಿಯೂ ಭಾರತದ ಸಾಫ್ಟ್ ವೇರ್ ಇಂಜಿನಿಯರ್‍ಗಳು ಇರುವುದೇ ಇದಕ್ಕೆ ಸಾಕ್ಷಿ.  18 ಸಾವಿರ ಎಕರೆ ಪ್ರದೇಶದಲ್ಲಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಮುಂದೆ ಬೆಂಗಳೂರಿನ ಕೈಗಾರಿಕಾ ಉಪ ಕೇಂದ್ರವಾಗಿ ಬೆಳೆಯಲಿದೆ. ಇದರಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವಂತಾಗಬೇಕು. ಉದ್ದಿಮೆಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಆಶ್ವಾಸನೆ ನೀಡಬೇಕು ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಯುವಕರು ತಪ್ಪು ದಾರಿಗೆ ಹೋಗದೆ ದೇಶದ ಅಭಿವೃದ್ಧಿಗೆ ಶ್ರಮಿಸಿದರೆ 2022 ರಲ್ಲಿ ಭಾರತ ವಿಶ್ವದ ಸೂಪರ್ ಪವರ್ ದೇಶವಾಗಲಿದೆ. ಬದಲಾವಣೆಯ ಪರ್ವದಲ್ಲಿರುವ ನಾವು ಸದಾವಕಾಶವನ್ನು ಉಪಯೋಗಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಂಸದ ಮುದ್ದಹನುಮೇಗೌಡ ಮಾತನಾಡಿ, ಗುಬ್ಬಿಯ ಬಿದರೆಹಳ್ಳ ಕಾವಲ್‍ನಲ್ಲಿ ಎಚ್.ಎ.ಎಲ್ ಪ್ರಾರಂಭವಾಗಲಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗುತ್ತಿರುವುದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಠಿಯಾಗಲಿವೆ. ವಸಂತನರಸಾಪುರ ಕೈಗಾರಿಕಾ ಪ್ರದೇಶ ಮುಂಬೈ-ಚೆನ್ನೈ ಇಂಡಸ್ಟ್ರೀಯಲ್ ಕಾರಿಡಾರ್ ಆಗಿ ಗುರುತಿಸಿಕೊಳ್ಳಲಿದೆ. ನಗರದ ಹೊರವಲಯ ಅಮಲಾಪುರ ಬಳಿ ಕೇಂದ್ರ ಸರಕಾರದ ಎಂಎಸ್‍ಎಂಇ ತಂತ್ರಜ್ಞಾನ ಕೇಂದ್ರವನ್ನು 15 ಎಕರೆ ಪ್ರದೇಶದಲ್ಲಿ 100 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉದ್ದಿಮೆಗಳನ್ನು ಸ್ಥಾಪಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ದೊರಕಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದದ ಪಿ.ಚಂದ್ರಪ್ಪ,ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ,ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್,ಜಿ.ಪಂ.ಸಿಇಒ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ.ದಿವ್ಯಾಗೋಪಿನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಲೀಲಾವತಿ,ವೆಂಕಟೇಶ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ನೇಮಕಾತಿ ಪತ್ರವನ್ನು ನೀಡಿದರು.

ಮುತ್ತೂಟ್ ಫಿನ್‍ಕಾರ್ಟ್, ಮುತ್ತೂಟ್ ಫೈನಾನ್ಸ್, ಜಾಯ್ ಅಲುಕ್ಕಾಸ್, ಐಸಿಐಸಿಐ ಬ್ಯಾಂಕ್, ಯುರೇಕಾ, ಇನ್‍ಕ್ಯಾಪ್, ರಾಣೆ, ವಾಜೀರ್, ಕ್ಯೂಬೆ ಸೇರಿದಂತೆ 136 ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

ಉದ್ಯೋಗ ಮೇಳಕ್ಕಾಗಿ ಸುಮಾರು 40 ಸಾವಿರ ಚದುರ ಅಡಿಗಳಲ್ಲಿ ದೂಳು ರಹಿತ 150 ಮಳಿಗೆಗಳನ್ನು ನಿರ್ಮಿಸಿದ್ದು,ನಿರೀಕ್ಷೆಗೂ ಮೀರಿ ಯುವಜನರು ಉದ್ಯೋಗ ಮೇಳಕ್ಕೆ ಆಗಮಿಸಿದ್ದು, ಆಯೋಜಕರಿಗೆ ಖುಷಿ ನೀಡಿದೆ. ಮೊದಲು ದಿನ 5 ರಿಂದ 10 ಸಾವಿರ ಯುವಜನರು ಮೇಳಕ್ಕೆ ಆಗಮಿಸಬಹುದು ಎಂದುಕೊಂಡಿದ್ದವರಿಗೆ ಸುಮಾರು 12 ಸಾವಿರದಷ್ಟು ಜನರು ಬೆಳಗ್ಗಿನ ನೊಂದಣಿ ವೇಳೆಗೆ ಆಗಮಿಸಿ, ನೂರಾರು ಮೀಟರ್ ಕ್ಯೂನಲ್ಲಿ ನಿಂತು ಹೆಸರು ನೊಂದಾಯಿಸಿದ್ದು, ನಮ್ಮ ದೇಶದ ನಿರುದ್ಯೋಗಿಗಳು ಪಡುತ್ತಿರುವ ಕಷ್ಟಕ್ಕೆ ಹಿಡಿದ ಕನ್ನಡಿಯಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News