ಸಂಸ್ಕೃತ ಆಡು ಭಾಷೆಯಾಗಿ ಬಳಕೆಯಾಗಬೇಕು: ಶ್ರೀಸಿದ್ದಲಿಂಗ ಸ್ವಾಮೀಜಿ

Update: 2018-01-06 11:49 GMT

ತುಮಕೂರು.ಜ.06:ಸಂಸ್ಕೃತ  ಆಡು ಭಾಷೆಯಾಗಿ ಜನ ಸಾಮಾನ್ಯರಿಗೆ ತಲುಪುವಂತಾಗಬೇಕು ಎಂದು ಸಿದ್ದಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಿದ್ದಿವಿನಾಯಕ ಸಮುದಾಯದಲ್ಲಿ ಸಂಸ್ಕೃತ ಭಾರತಿ ಸಂಸ್ಕೃತ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಕೃತ  ಗಂಗಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಂದು ಕಾಲದಲ್ಲಿ ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದ ಸಂಸ್ಕೃತ , ಇಂದು ಅಳಿವಿನ ಅಂಚಿನಲ್ಲಿರಲು ಕಾರಣ, ಜನಸಾಮಾನ್ಯರ ಬಾಯಲ್ಲಿ ಬಳಕೆಯಾಗದೆ ಇರುವುದು. ಆದ್ದರಿಂದ ಜನಸಾಮಾನ್ಯರ ಬಳಿಗೆ ಈ ಭಾಷೆಯನ್ನು ತೆಗೆದುಕೊಂಡು ಹೋಗುವ ಸಂಸ್ಕೃತ ಭಾರತಿ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕೆಂದರು.

ಸಂಸ್ಕೃತ  ಮೃತ್ಯಂಜಯ ಭಾಷೆ ಎಂದು ಕವಿ ಹಾಮಾ ನಾಯಕ್ ಹೇಳಿದ್ದಾರೆ. ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಇದೂ ಒಂದು. ವೇದ, ಪುರಾಣ,ಉಪನಿಷತ್ ಗಳಲ್ಲಿ ಹೆಚ್ಚಿನ ಬಳಕೆಯಲಿದ್ದು, ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಜನರು ತಮ್ಮ ಮನೆಗಳಲ್ಲಿ ಸಣ್ಣ ಪದಗಳನ್ನು ಬಳಕೆ ಮಾಡುವ ಮೂಲಕ ದೇವ ಭಾಷೆಗಿರುವ ಸಂಸ್ಕೃತವನ್ನು ಉಳಿಸಲು ಪ್ರಯತ್ನಿಸಬೇಕೆಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಸಂಸ್ಕೃತ ಗಂಗಾ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಸಂಸ್ಕೃತ ಭಾರತಿ ದಕ್ಷಿಣ ಪ್ರಾಂತ್ಯ ಮುಖ್ಯಸ್ಥ ಟಿ.ಎನ್.ಪ್ರಭಾಕರ, ಜಗತ್ತಿನ ಅತ್ಯಂತ ದೊಡ್ಡ ಗ್ರಂಥ ಮಹಾಭಾರತ ರಚನೆಗೊಂಡಿರುವುದು ಸಂಸ್ಕೃತ ಭಾಷೆಯಲ್ಲಿ. ಬ್ರಿಟಿಷರು ಭಾರತಕ್ಕೆ ಬಂದ ನಂತರ ಈ ವಿಚಾರ ಜಗತ್ತಿಗೆ ತಿಳಿಯಿತು. ಸಂಸ್ಕೃತ ಭಾಷೆಯಲ್ಲಿ ಅರ್ಥಿಕ, ಸಮಾಜಿಕ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಲಭ್ಯವಿದೆ. ದೆಹಲಿಯ ಕುತುಬ್ ಮಿನಾರ್ 450 ವರ್ಷಗಳ ಹಿಂದೆಯೇ ತುಕ್ಕು ಹಿಡಿಯದ ಕಬ್ಬಿಣದಿಂದ ನಿರ್ಮಾಣ ವಾಗಿತ್ತೆಂದರೆ, ನಮ್ಮ ಪೂರ್ವಜರ ಜ್ಞಾನ ಹೇಗಿತ್ತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ. ಸಂವಿಧಾನ ಬರೆದ ಡಾ.ಬಿ.ಆರ್,ಅಂಬೇಡ್ಕರ್ ಸಹ ಸಂಸ್ಕೃತ ವನ್ನು ರಾಜ ಭಾಷೆಯಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದರು. ಕಳೆದ 38 ವರ್ಷಗಳಿಂದ ಸಂಸ್ಕೃತ  ಭಾರತೀ, ಸಂಸ್ಕೃತವನ್ನು ಜನಸಾಮಾನ್ಯರ ಭಾಷೆಯಾಗಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಈ ರೀತಿಯ ಸಮ್ಮೇಳನಗಳು, ಕಾರ್ಯಾಗಾರಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದರು.

ಸಂಸ್ಕೃತಗಂಗಾ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾದೀಶ ರಾಜೇಂದ್ರ ಬಾದಾಮಿಕರ ಮಾತನಾಡಿ, ಸಂಸ್ಕೃತವನ್ನು ದೇವ ಭಾಷೆಯೆಂದು ವಿದೇಶಿಯರೇ ಒಪ್ಪಿಕೊಂಡು ಕಲಿಯಲು ಉತ್ಸುಕತೆ ತೋರುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಪಾಶ್ಚಾತ್ಯ ಸಂಸ್ಕೃತ  ಮತ್ತು ಭಾಷೆಗಳನ್ನು ಕಲಿಯಲು ಪೈಪೋಟಿ ನಡೆಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಜಗತ್ತಿಗೆ ಶೂನ್ಯವನ್ನು ಭಾರತ ಪರಿಚಯಿಸದೇ ಇದ್ದರೆ ಯಾವ ವಿಜ್ಞಾನವೂ ಮುಂದುವರೆಯುತ್ತಿರಲಿಲ್ಲ. ಒಂದು ಭಾಷೆ ಬೆಳೆಯ ಬೇಕೆಂದರೆ ಅದನ್ನು ಜನರು ಬಳಸಬೇಕು. ಮಾತೃಭಾಷೆಯ ಜೊತೆಗೆ ಸಂಸ್ಕೃತವನ್ನು ಕಲಿಯುವ ಪ್ರಯತ್ನವನ್ನು ಯುವಜನರು ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ.ನಂಜುಂಡಪ್ಪ,ಹೆಚ್.ಎಸ್.ರಾಮಣ್ಣ, ಆರ್.ಎಲ್.ರಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News