ಕಾಂಗ್ರೆಸ್ ರಾಜ್ಯಕ್ಕೆ ಸಮರ್ಥ ಆಡಳಿತ ನೀಡಿದೆ: ಡಾ.ಜಿ ಪರಮೇಶ್ವರ್

Update: 2018-01-06 12:59 GMT

ತುಮಕೂರು,ಜ.06: ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಸಮರ್ಥ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಗ್ರಾಮಾಂತರದ ಗೂಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಹಾಗೂ ಗ್ರಾಮಾಂತರದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ  ಸಮರ್ಥ ನಾಯಕತ್ವ ಮತ್ತು ಅಡಳಿತ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ ಎಂದರು.

ದೇಶದಲ್ಲಿರುವ ಜನಸಂಖ್ಯೆ ಶೇ.60 ರಷ್ಟು 40 ವರ್ಷದ ಒಳಗಿನವರಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧೀಯವರು 18 ವರ್ಷಕ್ಕೆ ಮತದಾನ ಮಾಡುವ ಹಕ್ಕನ್ನು ಜಾರಿಗೆ ತರುವ ಮೂಲಕ ಉತ್ತಮ ಕಾರ್ಯ ರೂಪಕ್ಕೆ ತಂದಿದ್ದಾರೆ. ರಾಜೀವ್ ಗಾಂಧಿಯವರ ಮಾರ್ಗದರ್ಶನದಲ್ಲೇ ನಡೆಯುತ್ತಿರುವ ರಾಹುಲ್ ಗಾಂಧಿಯವರನ್ನು ಮುಂದಿನ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮದಾಗಿದೆ. ರಾಜ್ಯದ ರೈತರ ಅಭಿವೃದ್ಧಿಗಾಗಿ 62 ಸಾವಿರ ಕೋಟಿ ರೂಗಳನ್ನು ರಾಜ್ಯ ಸರಕಾರ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಬರಗಾಲ ಆವರಿಸಿ ಸರಕಾರವನ್ನು ದೃತಿಗೆಡಿಸಿತ್ತು. ಆದರೂ ಕೂಡ ದೃತಿಗೆಡದೆ, ಸಹಕಾರಿ ಕ್ಷೇತ್ರದಲ್ಲಿ ರೈತರು ಮಾಡಿರುವ 8600 ಕೋಟಿ ರೂಗಳ ಸಾಲವನ್ನು ಮನ್ನಾ ಮಾಡಿ, ರೈತರ ಮನೆ,ಹಾಗೂ ಜಮೀನುಗಳನ್ನು ಉಳಿಸಿದ್ದೇವೆ. ಮುಂದೆಯೂ ರಾಜ್ಯದ ರೈತರ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಸರಕಾರ ಶ್ರಮಿಸಲಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಸರಕಾರದ ಖಜಾನೆಯಲ್ಲಿ ಸಂಪತ್ತನ್ನು ಲೂಟಿ ಮಾಡಿದ ಪಕ್ಷ ಅಂದರೆ ಅದು ಬಿಜೆಪಿ ಪಕ್ಷ. ಈ ಹಿಂದೆ ಅಧಿಕಾರದಲ್ಲಿದ್ದ 14 ಜನ ಸಚಿವರಲ್ಲಿ 5 ಜನ ಜೈಲಿಗೆ ಹೋಗಿದ್ದಾರೆ.ಮೂರು ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ರಾಜ್ಯದ ಜನತೆಯ ವಿರುದ್ದವಾಗಿ ನಡೆದುಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂದೆಯೂ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರಕಾರ ಬಯಲುಸೀಮೆಯ ಜನರಿಗೆ ಹೇಮಾವತಿ ನೀರನ್ನು ಹರಿಸಿ ಲಕ್ಷಾಂತರ ಜನರ ದಾಹವನ್ನು ತೀರಿಸಿದೆ. ಕಾಂಗ್ರೆಸ್ ಸರಕಾರ ಕೇವಲ ಅಧಿಕಾರ ಮಾಡಲು ಬಂದಿಲ್ಲ. ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸಲು ಬಂದಿದೆ. ಗ್ರಾಮೀಣ ಭಾಗದ ಬಡ ಜನರಿಗೆ ಪಶುಸಂಗೋಪನಾ ಇಲಾಖೆಯಿಂದ ರೈತರಿಗೆ ಪಶುಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಬಡವರಿಗೆ ಹಸು ಸಾಕಾಣಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ಸಣ್ಣ ನೀರಾವರಿ ಇಲಾಖೆಯಿಂದ ರೈತರ ತೋಟಗಳಿಗೆ ಕೋಟ್ಯಾಂತರಹ ಹಣವನ್ನು ಬೀಡುಗಡೆ ಮಾಡಲಾಗಿದ್ದು,ಇನ್ನೂ ಅನೇಕ ಯೋಜನೆಗಳನ್ನು ಜಿಲ್ಲೆ ಮತ್ತು ರಾಜ್ಯಕ್ಕೆ ನೀಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಲಾಗಿದೆ ಎಂದು ಹೇಳಿದರು.

ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ,ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ವಿರೋಧ ಪಕ್ಷದ ನಾಯಕರುಗಳು ರಾಜ್ಯದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಲು ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ,ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಿಲ್ಲದೇ ಕುಗ್ಗಿ ಹೋಗಿತ್ತು. ಆದರೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ. ಕಳೆದ ಚುನಾವಣೆಯಲ್ಲಿ 40 ಸಾವಿರಕ್ಕಿಂತ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಕ್ಷೇತ್ರದ ಜನರು ನನ್ನನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ರಾಯಸಂದ್ರ ರವಿಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ವೇದಿಕೆಯಲ್ಲಿ ಸಂಸದ ಚಂದ್ರಪ್ಪ,ಶಾಸಕ ಕೆ.ಎನ್ ರಾಜಣ್ಣ, ಉಪಾಧ್ಯಕ್ಷ ಪ್ರೊ.ರಾಧಕೃಷ್ಣ ಡಾ.ರಫೀಕ್‍ಅಹಮದ್, ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ,ಮಾಜಿ ಶಾಸಕ ಎಚ್.ನಿಂಗಪ್ಪ,ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್,ಯಲಚವಾಡಿ ನಾಗರಾಜ್,ಎಚ್.ಎನ್ ದೀಪಕ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ,ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಇಂದೀರಾ ದೇನಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು. 

ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ.ಡಾ.ಜಿ.ಪರಮೇಶ್ವರ್,ಸಚಿವ ಟಿ.ಬಿ ಜಯಚಂದ್ರ,ಶಾಸಕ ಕೆ.ಎನ್ ರಾಜಣ್ಣರವರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷವನ್ನು ಗೆಲ್ಲಿಸಲು ಪ್ರಯತ್ನ ಮಾಡಬೇಕು.

--ಕೆ.ಎಚ್ ಮುನಿಯಪ್ಪ,ಕೋಲಾರ ಸಂಸದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News