×
Ad

ರಾಜಕೀಯ ಲಾಭಕ್ಕೆ ಅಶಾಂತಿ ಸೃಷ್ಟಿಸುವ ಸಂಘಟನೆಗಳ ವಿರುದ್ದ ಕಠಿಣ ಕ್ರಮ: ರಾಮಲಿಂಗಾರೆಡ್ಡಿ

Update: 2018-01-06 18:46 IST

ಶಿವಮೊಗ್ಗ, ಜ. 6: ಶಿವಮೊಗ್ಗ ನಗರದಲ್ಲಿ ಪೋಲೀಸ್ ಕಮೀಷನರೇಟ್ ಕಛೇರಿ ಆರಂಭಿಸುವ ಬಗ್ಗೆ  ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೋಟೆ ಪೋಲಿಸ್ ಠಾಣೆ ಕಟ್ಟಡಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಕಮೀಷನರೇಟ್ ಕಛೇರಿ ಆರಂಭಿಸಲಾಗುತ್ತದೆ ಎಂದರು. 

ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ- ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಯಾವುದೇ ಸಂಘಟನೆಗಳಿರಲಿ. ಅಂತಹವುಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ಈ ವಿಷಯದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು. 

ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿರುವ ಸಂಘಟನೆಗಳ ನಿಷೇಧದ ಕುರಿತಂತೆ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಗಮನಿಸಿದ್ದು, ಈ ಬಗ್ಗೆ ಸಿಎಂರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 28 ಸಾವಿರ ಪೋಲಿಸ್  ಕಾನ್‍ಸ್ಟೇಬಲ್, 1642 ಪಿಎಸ್‍ಐಗಳ ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ 18 ಸಾವಿರ ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು. 
ಇಷ್ಟೆಲ್ಲಾ ನೇಮಕಾತಿ ನಡೆದರೂ ಸಹ ಇನ್ನೂ ಶೇ.15 ರಷ್ಟು ಹುದ್ದೆಗಳು ಖಾಲಿಯಿವೆ. ಪೊಲೀಸ್ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿಯೂ ಸಹ ಸರ್ಕಾರ ಮುಂದಾಗಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಪಡಿತರದ ಬದಲಾಗಿ 400 ರೂ. ಮತ್ತು 2000 ವಿಶೇಷ ಭತ್ಯೆಯನ್ನು ನೀಡಲಾಗುತ್ತಿದೆ ಎಂದರು. 

ಉದ್ಘಾಟನೆ: ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಗ್ರಾಮದ ಬಳಿ 62 ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿರುವ ನೂತನ ಕೇಂದ್ರ ಕಾರಾಗೃಹ, ನಗರದಲ್ಲಿ ನಿರ್ಮಿಸಲಾಗಿರುವ ಕೋಟೆ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನೆ ಹಾಗೂ ನಗರದಲ್ಲಿ 45.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 

ಸಾರ್ವಜನಿಕ ಬಳಕೆಗೆ ಹಳೇ ಜೈಲ್ ಜಾಗ:
ನಗರದ ಹೊರವಲಯ ಸೋಗಾನೆ ಬಳಿ ಕೇಂದ್ರಿಯ ಕಾರಾಗೃಹ ಉದ್ಘಾಟನೆಯಾಗುವುದರಿಂದ ನಗರದ ರಾಜೇಂದ್ರ ನಗರದಲ್ಲಿರುವ ಹಳೇಯ ಕಾರಾಗೃಹ ಮುಂಭಾಗದ 20 ಎಕರೆ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡುವ ಕುರಿತಂತೆ, ಕಾರಾಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಹಳೇ ಕಾರಾಗೃಹ ಸ್ಥಳಕ್ಕೆ ಸಚಿವರು ಖುದ್ದು ಭೇಟಿ ನೀಡಿ ಪರಿಶೀಲನೆ ನೆಡಸಿದರು. ಸಭೆ, ಸಮಾರಂಭ, ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಕಾರಾಗೃಹ ಮುಂಭಾಗದ 20 ಎಕರೆ ಜಾಗ ಬಿಟ್ಟು ಕೊಡಬಹುದಾಗಿದೆ ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸುವುದಾಗಿಯೂ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News