ಸಿಎಂ ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರು: ಲಾಠಿ ಪ್ರಹಾರ- ಬಂಧನ
ಶಿವಮೊಗ್ಗ, ಜ. 6: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಬಂಧಿಸಿದ ಘಟನೆ ಶನಿವಾರ ನಗರದ ಕುವೆಂಪು ರಸ್ತೆಯಲ್ಲಿ ನಡೆಯಿತು.
ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತಿತರ ಗಣ್ಯರು, ಭದ್ರತಾ ಸಿಬ್ಬಂದಿಗಳಿದ್ದ ಕಾರು ಕುವೆಂಪು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆಯಿತು. ಏಕಾಏಕಿ ಬಿಜೆಪಿ ಕಾರ್ಯಕರ್ತರು ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡ ಬಂದರು. ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿಯಿದ್ದ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ತಕ್ಷಣವೇ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಎಲ್ಲರನ್ನು ಬಂಧಿಸಿ ಕರೆದೊಯ್ದರು. ಈ ಘಟನೆಯಿಂದ ಕೆಲ ಸಮಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಖಂಡರಾದ ಡಿ.ಎಸ್.ಅರುಣ್, ಚೆನ್ನಿ, ದತ್ತಾತ್ರಿ, ಮೋಹನ್ ರೆಡ್ಡಿ, ಮಾಲತೇಶ್, ಹಿರಣ್ಣಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಘಟನೆಯ ನಂತರ ನಗರದ ಜೈಲ್ ಸರ್ಕಲ್‍ನಲ್ಲಿಯೂ ಬಿಜೆಪಿಯ ಮತ್ತೊಂದು ಗುಂಪು ಸಿಎಂ ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದರು. ತಕ್ಷಣವೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಒಟ್ಟಾರೆ ಸುಮಾರು 20 ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.