×
Ad

ರಾಜ್ಯವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಸಂಕಲ್ಪ: ಸಿದ್ಧರಾಮಯ್ಯ

Update: 2018-01-06 20:11 IST

ಶಿವಮೊಗ್ಗ, ಜ. 6: ಬರಮುಕ್ತ, ಹಸಿವುಮುಕ್ತ, ಗುಡಿಸಲು ಮುಕ್ತ, ಅಪೌಷ್ಠಿಕಾಂಶಮುಕ್ತ ಹಾಗೂ ಸಮಸ್ಯೆಗಳಿಂದ ಮುಕ್ತವಾದ ಸಮೃದ್ಧ ಹಾಗೂ ಶಾಂತಿಯುತ ರಾಜ್ಯವನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದ್ದು, ಅದಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. 

ಶನಿವಾರ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 200ಕೋಟಿ ರೂ.ಗಳ ವೆಚ್ಚದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಮುಂಬೈ, ಹೈದ್ರಾಬಾದ್, ಮಧ್ಯ ಹಾಗೂ ಕರಾವಳಿ ಪ್ರಾಂತ್ಯಗಳು ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳ ವಿಕಾಸಕ್ಕೆ ತಾರತಮ್ಯವಿಲ್ಲದೆ ಕೋಟ್ಯಾಂತರ ರೂ.ಗಳ ಅಭಿವೃದ್ದಿ ಅನುದಾನ ಮಂಜೂರು ಮಾಡಲಾಗಿದೆ. ನೀರಾವರಿ, ಲೋಕೋಪಯೋಗಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ದಿ, ವಿದ್ಯುತ್ ಸರಬರಾಜು, ಬಹುಮುಖ್ಯವಾಗಿ ಸಾಮಾಜಿಕ ನ್ಯಾಯಕ್ಕಾಗಿ ಅಪಾರವಾದ ಅನುದಾನ ಬಿಡುಗಡೆ ಮಾಡಲಾಗಿದೆ. ಕೂಡಲ ಸಂಗಮದಲ್ಲಿ ಘೋಷಿಸಿದಂತೆ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10,000ಕೋಟಿ ಗಳನ್ನು ವ್ಯಯ ಮಾಡುತ್ತಿದೆ. ಈವರೆಗೆ 45,000ಕೋಟಿ ರೂ.ಗಳನ್ನು ಈವರೆಗೆ ಖರ್ಚು ಮಾಡಿದೆ. ಮಾರ್ಚ್ ಮಾಸಾಂತ್ಯದೊಳಗೆ 50,000ಕೋಟಿ ರೂ.ಗಳನ್ನು ಅಂದುಕೊಂಡಂತೆ ನೀರಾವರಿ ಯೋಜನೆಗಳಿಗಾಗಿಯೇ ಖರ್ಚು ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ 10,500ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಹಳ್ಳಿಗಾಡಿನ ಮಹಿಳೆಯರು ಶೌಚಾಲಯಕ್ಕಾಗಿ ಸೂರ್ಯಾಸ್ತವಾಗುವವರೆಗೆ ಕಾಯಬೇಕಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಶೇಷವಾದ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಸುಮಾರು 6,000ಗ್ರಾಮ ಪಂಚಾಯತ್ ಗಳು ಹಾಗೂ ಸ್ಥಳೀಯ ಸಂಸ್ಥೆಗಳನ್ನೊಳಗೊಂಡಂತೆ 55ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2018ರ ಮಾರ್ಚ್ ಹೊತ್ತಿಗೆ ಇಡೀ ರಾಜ್ಯ ಮೊದಲ ಬಾರಿಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿ ಘೋಷಣೆಯಾಗಲಿದೆ ಎಂದು ಹೇಳಿದರು. 

ಕಳೆದ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ  ಒಟ್ಟು 165 ಪ್ರಣಾಳಿಕೆಯಲ್ಲಿನ 155 ಪ್ರಣಾಳಿಕೆಯನ್ನು ಈಡೇರಿಸಲಾಗಿದೆ. ಅಲ್ಲದೇ ಘೋಷಿಸದಿರುವ ಅನೇಕ ಯೋಜನೆಗಳನ್ನು ಕೂಡ ಅನುಷ್ಠಾನಕ್ಕೆ ತರಲಾಗಿದೆ ಎಂದರು. ರಾಜ್ಯದ 4 ಕೋಟಿಗೂ ಹೆಚ್ಚಿನ ಜನರಿಗೆ ತಲಾ 7 ಕೆ.ಜಿ.ಉಚಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಈ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ದೇಶದ ಏಕೈಕ ರಾಜ್ಯ ಕರ್ನಾಟಕ ಎಂದವರು ನುಡಿದರು. 

ಅಂಗನವಾಡಿ ಹಾಗೂ 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ರಾಜ್ಯದ 1.2ಕೋಟಿ ಮಕ್ಕಳಿಗೆ ಉಚಿತ ಹಾಲನ್ನು ವಿತರಿಸಲಾಗುತ್ತಿದೆ. ಸರ್ಕಾರ ಆಡಳಿತ ಕೈಗೆತ್ತಿಕೊಂಡ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಈವರೆಗೆ 1.82ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಈ ಯೋಜನೆ ರಾಜ್ಯ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಸಹಕಾರಿಯಾಗಿದೆ ಮಾತ್ರವಲ್ಲ ಸಂಕಷ್ಟದ ಸಂದರ್ಭದಲ್ಲಿ ಬೆಳೆಯ ರಕ್ಷಣೆಗೆ ಸಹಕಾರಿಯಾಗಿದೆ ಎಂದರು.

ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್ ಸೌಲಭ್ಯ ಹೊಂದಿರದ ವಿದ್ಯಾರ್ಥಿಗಳಿಗೆ 1500 ರೂ.ಗಳ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದಲ್ಲದೇ ತಾಂತ್ರಿಕ ಮತ್ತು ತಾಂತ್ರಿಕೇತರ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಎಲ್ಲಾ ವರ್ಗದ 1,82,000ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಎಲ್ಲಾ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆಗ ಮಾತ್ರ ಸಮಾಜದ ತಾರತಮ್ಯ ನಿವಾರಣೆ ಸಾಧ್ಯವಾಗಲಿದೆ ಎಂದರು.

ರೈತರಿಗೆ 3ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಿ ಸಹಕರಿಸಿದೆ. ಸ್ವಸಹಾಯ ಗುಂಪಿನ ಮಹಿಳೆಯರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಹಾಯಧನದ ಮೊತ್ತವನ್ನು ರೂ.5,000/-ಗಳಿಂದ 25,000/-ರೂ.ಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೇ ಬಡ್ಡಿರಹಿತ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಿವಿಧ ನಿಗಮ-ಮಂಡಳಿಗಳ ಮೂಲಕ ವಿವಿಧ ವರ್ಗಗಳ ಫಲಾನುಭವಿಗಳಿಗೆ ನೀಡಲಾಗಿದ್ದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿ ಋಣಮುಕ್ತಗೊಳಿಸಲಾಗಿದೆ. ಸಹಕಾರ ಸಂಘಗಳ ಮೂಲಕ ರಾಜ್ಯದ 22.57ಲಕ್ಷ ರೈತರ 8156ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿದೆ ಎಂದರು.

ಕಳೆದ 4ವರ್ಷ 8ತಿಂಗಳುಗಳ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ, ಜನಾಂಗಗಳ ಸರ್ವಾಂಗೀಣ ವಿಕಾಸಕ್ಕೆ ಬರೋಬ್ಬರಿ 86,000ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ರಾಜ್ಯದಲ್ಲಿನ ಎಲ್ಲಾ ಧರ್ಮೀಯರನ್ನು ಒಗ್ಗೂಡಿಸಿಕೊಂಡು ಮುಂದೆ ಸಾಗಬೇಕಾದ, ಅವರನ್ನು ಸಮಾನವಾಗಿ ಕಾಣಬೇಕಾದ ಹಾಗೂ ಅಭಿವೃದ್ಧಿ ಪಥದತ್ತ ಕರೆದೊಯ್ಯಬೇಕಾದ ಅಗತ್ಯವಿದೆ. ಲಂಬಾಣಿ ತಾಂಡಾಗಳ ವಿಕಾಸಕ್ಕೆ ಕ್ರಮವಹಿಸಲಾಗಿದೆ. ದೇವರಾಜ ಅರಸು ಅವರ ಆಡಳಿತದಲ್ಲಿ ಜಾರಿಗೆ ತಂದ ಉಳುವವನೆ ಭೂಮಿಯ ಒಡೆಯ ಕಾಯ್ದೆಯಂತೆ ವಾಸಿಸುವವನೆ ಮನೆಯ ಒಡೆಯ ಎಂಬ ನಿಯಮವನ್ನು ಜಾರಿಗೆ ತಂದು ನಿರ್ವಸತಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. 

ಸಮಾಜವಾದದ ಚಳುವಳಿಯ ಉಗಮ ಕ್ಷೇತ್ರ ಈ ನೆಲ. ಕುವೆಂಪುರಂತಹ ಮಹಾನ್ ಚೇತನ ಹುಟ್ಟಿದ ನೆಲ. ಅವರು ರಚಿಸಿದ ನಾಡಗೀತೆಯನ್ನು ಎಲ್ಲರೂ ಮನಮೆಚ್ಚಿ ಹೃದಯತುಂಬಿ ಹಾಡುತ್ತೇವೆ. ಆದರೆ, ಅವರ ಆದರ್ಶವನ್ನು ಮರೆತಿದ್ದೇವೆ. ಅದರಂತೆ ನಡೆದುಕೊಳ್ಳುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ವತಿಯಿಂದ ಪ್ರಕಟಿಸಲಾದ ಅಭಿವೃದ್ದಿ ಕಾರ್ಯಕ್ರಮಗಳ ಸಮಗ್ರ ಮಾಹಿತಿಯುಕ್ತ ಹೊತ್ತಿಗೆಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾವಿಜಯಕುಮಾರ್, ತಾ.ಪಂ.ನ ನವಮಣಿ ರವಿಕುಮಾರ್, ಸುಂದರೇಶ್ ಜವಳಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News