ಸಂಕ್ರಾಂತಿ ನಂತರ ಕಾಂಗ್ರೆಸ್ ಸೇರ್ಪಡೆ: ಮಾಜಿ ಸಚಿವ ಸಿ.ಎಚ್.ವಿಜಯಶಂಕರ್
Update: 2018-01-06 20:47 IST
ಮೈಸೂರು,ಜ.6: ನಾನು ಮೂಲ ಕಾಂಗ್ರೆಸ್ಸಿಗನಾಗಿದ್ದು, ಪಕ್ಷ ಸೇರಲು ಸರಿಯಾದ ಕಾಲ ಕೂಡಿ ಬಂದಿರಲಿಲ್ಲ. ಸಂಕ್ರಾಂತಿಯ ನಂತರ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೇರಿದಂತೆ ಪಕ್ಷದ ಹಿರಿಯರು ನನ್ನೊಂದಿಗೆ ಚರ್ಚಿಸಿದ್ದಾರೆ. 1980ರಲ್ಲಿ ಕಾಂಗ್ರೆಸ್ ನಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ಅದರಿಂದ ಹೊರನಡೆದು ಬಿಜೆಪಿ ಸೇರಿದ್ದೆ. ಆದರೆ ಅಲ್ಲಿಯೂ ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಹೊರ ಬಂದೆ. ಈಗ ಮತ್ತೆ ಕುಟುಂಬ ಸೇರುವ ಸಂದರ್ಭ ಬಂದಿದೆ ಎಂದರು. ನಾನು ಟಿಕೇಟ್ ಕೊಡಿ ಎಂದು ಕೇಳಲ್ಲ. ನನಗಿಂತಲೂ ಅನುಭವಿಕರು, ಹಿರಿಯರು ಇದ್ದಾರೆ. ಟಿಕೆಟ್ ಕೊಟ್ಟಲ್ಲಿ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.