​ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ: ಸಚಿವ ಕಾಗೋಡು ತಿಮ್ಮಪ್ಪ

Update: 2018-01-06 17:27 GMT

ಸಾಗರ, ಜ.6: ಗ್ರಾಮೀಣ ಸರಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚು ಕಾಳಜಿ ವಹಿಸಿದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಿಕ್ಕಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಚಿವ ಕಾಗೋಡು ತಿಮ್ಮಪ್ಪತಿಳಿಸಿದ್ದಾರೆ.

ತಾಲೂಕಿನ ಬರದವಳ್ಳಿಯಲ್ಲಿ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸವಿಜೇನು ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಬರದವಳ್ಳಿ ಗ್ರಾಮ ಹೋರಾಟದ ಭೂಮಿ. ಕಾಗೋಡು ಸತ್ಯಾಗ್ರಹ ಕಾಲದಿಂದಲೂ ಈ ಭಾಗದ ಜನರೊಂದಿಗೆ ತನಗೆ ಅವಿನಾಭಾವ ಸಂಬಂಧವಿದೆ. ಕೆಲವು ವರ್ಷಗಳ ಹಿಂದೆ ದುರಸ್ತಿಯಾಗಿದ್ದ ಶಾಲೆಯನ್ನು ಪುನರ್ ನಿರ್ಮಾಣ ಮಾಡುವಲ್ಲಿ ಮುಖ್ಯಶಿಕ್ಷಕ ನಿಂಗಪ್ಪವಹಿಸಿದ ಪಾತ್ರ ಅತ್ಯಂತ ಸ್ವಾಗತಾರ್ಹವಾದದ್ದು ಎಂದರು.

ಜನಪ್ರತಿನಿಧಿಗಳು, ದಾನಿಗಳು ಹಾಗೂ ಶಾಲಾಭಿವೃದ್ಧ್ದಿ ಸಂಘದ ಸಹಕಾರ ಪಡೆದು ಒಂದೂವರೆ ವರ್ಷದಲ್ಲಿ ಸುಮಾರು 18 ಲಕ್ಷ ರೂ. ಸಂಗ್ರಹಿಸಿ ಶಾಲೆಯನ್ನು ಪುನಶ್ಚೇತನಗೊಳಿಸಿದ ಕ್ರಮ ಇತರ ಶಿಕ್ಷಕರಿಗೆ ಅನುಕರಣೀಯ. ಶಿಕ್ಷಕರ ಸಾಧನೆಯನ್ನು ಗುರುತಿಸಿ ಜಿಲ್ಲಾಡಳಿತ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುುದು ಸಂತೋಷ ತಂದಿದೆ ಎಂದರು.

ಬರದವಳ್ಳಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ ನೀಡಿದ ಮನವಿಯಂತೆ ಎರಡು ಹೆಚ್ಚುವರಿ ಕೊಠಡಿ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಜೊತೆಗೆ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಅಶೋಕ ಮರ್ಗಿ, ಸರಕಾರಿ ಶಾಲೆ ಉಳಿಯಬೇಕಾದರೆ ಸ್ಥಳೀಯರ ಸಹಕಾರ ಅಗತ್ಯ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ, ನುರಿತ ಶಿಕ್ಷಕರು ಇರುತ್ತಾರೆ. ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಗಣಪತಿ ಬಿ.ಆರ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಿರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಅಣ್ಣಪ್ಪ, ಸದಸ್ಯೆ ರತ್ನಮ್ಮ, ಅನಿಲಗೌಡ, ಪ್ರಮುಖರಾದ ಶಶಿಕಲಾ, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಗಣಪತಪ್ಪ, ಕಿರಣಕುಮಾರ್ ಇದ್ದರು.

ಭಡ್ತಿ ಮುಖ್ಯಶಿಕ್ಷಕ ನಿಂಗಪ್ಪಎಂ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀದೇವಿ ವಂದಿಸಿದರು. ಜಯಲಕ್ಷ್ಮೀ ನಿರೂಪಿಸಿದರು. ನಂತರ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News