ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರ ಸಾವು
ಬೆಂಗಳೂರು, ಜ.7: ವಸತಿ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ವಿಷಾನೀಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಸಂದ್ರಪಾಳ್ಯದಲ್ಲಿ ನಡೆದಿದೆ.
ನಗರದ ಸೋಮಸುಂದರಪಾಳ್ಯದ ಎನ್.ಡಿ.ಸೆಪಲ್ ಅಪಾರ್ಟ್‌ಮೆಂಟ್ ಸ್ವಚ್ಛಗೊಳಿಸುವಾಗ ಈ ಅವಘಡ ಸಂಭವಿಸಿದ್ದು, ಸ್ಥಳೀಯ ನಿವಾಸಿ ಎಚ್. ಶ್ರೀನಿವಾಸ್ (58), ಕೋಲಾರ ಜಿಲ್ಲೆ ಶ್ರೀನಿವಾಸಪುರದ ನಾರಾಯಣಸ್ವಾಮಿ (35) ಹಾಗೂ ತುಮಕೂರಿನ ಮಾದೇಗೌಡ (42) ಎಂಬುವರು ಮೃತಪಟ್ಟ ಕಾರ್ಮಿಕರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ರವಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಎನ್‌ಡಿ ಸೆಪಲ್ ಅಪಾರ್ಟ್‌ಮೆಂಟ್ ಸಮುಚ್ಛಯಕ್ಕೆ ಹೋಗಿ ಕೂಲಿ ಕಾರ್ಮಿಕನೊಬ್ಬ ಕೊಳಚೆ ನೀರಿನ ಗುಂಡಿಗೆ ಇಳಿದಿದ್ದ. ಸ್ವಲ್ಪ ಸಮಯದ ನಂತರ ಗುಂಡಿಯಲ್ಲಿದ್ದ ಕಾರ್ಮಿಕ, ವಿಷಾನೀಲ ಸೇವಿಸಿ ಉಸಿರುಗಟ್ಟಿ ಅಸ್ವಸ್ಥಗೊಂಡು ಗುಂಡಿಯಲ್ಲೇ ಕುಸಿದು ಬಿದ್ದಿದ್ದ ಎನ್ನಲಾಗಿದೆ.
ಆತನನ್ನು ಹುಡುಕಲು ಗುಂಡಿಗೆ ಇಳಿದಿದ್ದ ಇನ್ನಿಬ್ಬರೂ, ಅಲ್ಲೆ ವಿಷಾನೀಲ ಸೇವಿಸಿ ಅಸ್ವಸ್ಥಗೊಂಡಿದ್ದರು. ಇದರಿಂದ ಆತಂಕಗೊಂಡ ವಸತಿ ಸಮುಚ್ಛಯದ ನಿವಾಸಿಗಳು ಹಾಗೂ ಭದ್ರತಾ ಸಿಬ್ಬಂದಿ ಗುಂಡಿಯ ಬಳಿ ಬಂದು ನೋಡಿದಾಗ, ವಿಷಯ ಗೊತ್ತಾಗಿ ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಮಧ್ಯಾಹ್ನ 12ಗಂಟೆಯ ಸುಮಾರಿಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸರು, ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶ್ರೀನಿವಾಸ್ ಹಾಗೂ ನಾರಾಯಣಸ್ವಾಮಿ ಅವರ ಮೃತದೇಹವನ್ನು ಹೊರಗೆ ತೆಗೆದು ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದರು. ಇನ್ನೊಬ್ಬ ಕಾರ್ಮಿಕ ಮಾದೇಗೌಡ, ಉಸಿರಾಡುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ದಾಖಲು: ಎನ್.ಡಿ.ಡೆವಲಪರ್ಸ್ ನಾಲ್ಕು ಮಹಡಿಯ 5ಬ್ಲಾಕ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಆಡಳಿತ ಮಂಡಳಿ ಇದೆ. ಆದರೂ, ನಿರ್ಲಕ್ಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಿ ಇಲ್ಲಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಡಳಿತ ಮಂಡಳಿಯ ಮೂವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ಹತ್ತಿರ ಸುಳಿಯಲಿಲ್ಲ: ಗುಂಡಿಯಲ್ಲಿ ಕಾರ್ಮಿಕರು ಸಿಲುಕಿದ್ದಾಗ, ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಯಾರೂ ಸಹಾಯಕ್ಕೆ ಹೋಗಿಲ್ಲ. ಹೀಗಾಗಿ, ನಮ್ಮ ಕುಟುಂಬಸ್ಥರು ಸಾವನ್ನಪ್ಪಿದ್ದಾರೆಂದು ಮೃತರ ಸಂಬಂಧಿಕರು ಆರೋಪಿಸಿದರು.
ಘಟನಾ ಸ್ಥಳಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಸ್ಥಳೀಯ ಕಾರ್ಪೋರೇಟರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
5 ಲಕ್ಷ ರೂ.ಪರಿಹಾರ:
ಎಸ್‌ಟಿಪಿ ಶುಚಿಗೊಳಿಸಲು ಹೋಗಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ 5ಲಕ್ಷ ರೂ.ಪರಿಹಾರ ಘೋಷಿಸಿದ್ದು, ಮೂವರು ಸಾವನ್ನಪ್ಪಿರುವ ದುರಂತದ ಹಿಂದೆ ಅರ್ಪಾಟ್‌ಮೆಂಟ್ ನಿರ್ಲಕ್ಷವಿದೆ. ಅರ್ಪಾಟ್‌ಮೆಂಟ್ ಮತ್ತು ಸರಕಾರದಿಂದ ಮೃತ ಕಾರ್ಮಿಕರಿಗೆ ಪರಿಹಾರ ನೀಡುವುದು’
-ಸಂಪತ್ ರಾಜ್, ಮೇಯರ್ ಬಿಬಿಎಂಪಿ