ಮೂಡಿಗೆರೆ: ಎಂಜಿಎಂ ಆಸ್ಪತ್ರೆಯಲ್ಲಿ ಮೊಣ ಕಾಲು ಮತ್ತು ಭುಜದ ಉಚಿತ ತಪಾಸಣಾ ಶಿಬಿರ
ಮೂಡಿಗೆರೆ, ಜ.7: ಆರೋಗ್ಯ ಒಂದಿದ್ದರೆ ಮನುಷ್ಯನಿಗೆ ಕೋಟಿ ರೂ. ಹಣ ಹಾಗೂ ಆಸ್ತಿಯಿದ್ದಂತೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಾಗಿ ಗಮನಹರಿಸಬೇಕೆಂದು ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಎನ್.ಜೆ.ಲೋಬೋ ತಿಳಿಸಿದರು.
ಅವರು ರವಿವಾರ ಲಯನ್ಸ್ ಕ್ಲಬ್, ಮಂಗಳೂರಿನ ಆರ್ಥೋಸ್ಕೋಪಿ ಮತ್ತು ಸ್ಪೋಟ್ಸ್ ಮೆಡಿಸಿನ್ ಕ್ಲಿನಿಕ್ ಇದರ ವತಿಯಿಂದ ಸರಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ಮೊಣ ಕಾಲು ಮತ್ತು ಭುಜದ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಹಣದಿಂದ ಆರೋಗ್ಯ ಖರೀದಿಸಲು ಸಾಧ್ಯವಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹಾಗಾಗಿ ಆರೋಗ್ಯವಂತರಾಗಲು ಯೋಗ, ವ್ಯಾಯಾಮ ಹಾಗೂ ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದ ಅವರು, ಜನರಿಗೆ ಉತ್ತಮ ಆರೋಗ್ಯ ಸಿಗಬೇಕೆಂದು ಸಂಸ್ಥೆ ವತಿಯಿಂದ ಹಲವಾರು ಶಿಬಿರಗಳನ್ನು ಮಾಡಲಾಗಿದೆ. ಈಗಾಗಲೇ ಮೊಣ ಕಾಲು ಮತ್ತು ಭುಜದ ಉಚಿತ ತಪಾಸಣಾ ಶಿಬಿರವನ್ನು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನಡೆಸಿದ್ದು. ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ಮಂಗಳೂರಿನ ಡಾ.ಅರವಿಂದ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮೊಣಕಾಲು ಭುಜದಲ್ಲಿ ಲಾಕಿಂಗ್ ಆದವರು, ಜಾರುವಿಕೆ, ಊತ, ಪೆಟ್ಟಾದವರು, ಶಬ್ದ ಬರುವುದು, ನೋವು ಇರುವವರು ಹಾಗೂ ಇತರೇ ಭುಜ ಹಾಗೂ ಮೊಣಕಾಲಿನ ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಂಡು ಗುಣಮುಖರಾಗಿದ್ದಾರೆ. ಅಲ್ಲದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ 3 ಸಾವಿರ ಮಂದಿ ರೋಗಿಗಳಿಗೆ ಮೊಣಕಾಲು ಹಾಗೂ ಭುಜದ ಶಸ್ತ್ರ ಚಿಕಿತ್ಸೆ ನೀಡಿದ್ದು, ಉತ್ತಮ ಪಲಿತಾಂಶ ಬಂದಿದೆ. ಹಾಗಾಗಿ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಾಲಗೌಡ, ವಲಯ ಅಧ್ಯಕ್ಷ ಚಂದ್ರಕಾಂತ್, ಲಯನಸ್ ಕ್ಲಬ್‍ನ ಮಾಜಿ ಅಧ್ಯಕ್ಷೆ ರೂಪಾ, ಎಂ.ಎನ್.ಅಶ್ವಥ್, ಡಿ.ಕೆ.ಲಕ್ಷ್ಮಣ್‍ಗೌಡ, ಪ್ರದೀಪ್, ಹೇಮಶೇಖರ್, ಡಾ.ಆತ್ಮಾನಂದ ಹೆಗಡೆ, ಡಾ.ಮಿಥುನ ಪೈ, ಡಾ.ವಿನಯ್, ಶರತ್ ಮತ್ತಿತರರಿದ್ದರು.