ಕೊಲೆಗಳಲ್ಲಿ ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತಿದೆ : ಎಚ್.ಡಿ.ದೇವೇಗೌಡ

Update: 2018-01-07 14:43 GMT

ಚಿಕ್ಕಮಗಳೂರು, ಜ.7: ರಾಜ್ಯದಲ್ಲಿ ಕೊಲೆಗಳು ನಡೆಯುತ್ತಲೇ ಇವೆ. ದಿನದಿಂದ ದಿನಕ್ಕೆ ಹೀನ ಕೃತ್ಯ ನಡೆಯುತ್ತಿದೆ. ಇದರಲ್ಲಿ ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಅವರು ರವಿವಾರ ನಗರಕ್ಕೆ ಆಗಮಿಸಿದ ವೇಳೆ ಮಂಗಳೂರಲ್ಲಿ ಸರಣಿ ಸಾವು ಪ್ರಕರಣಗಳ ಕುರಿತು ಪ್ರತಿಕ್ರಿಯೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರಕಾರ ಕಾನೂನು ಸುವ್ಯವಸ್ಥೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಕಿಡಿಗೇಡಿ ಕೃತ್ಯಗಳು ನಡೆಯದಂತೆ ಸರಕಾರ ಎಚ್ಚರ ವಹಿಸಿ ಅಗತ್ಯ ಕ್ರಮ ಜರುಗಿಸುವುದು ಅಗತ್ಯ ಎಂದು ನುಡಿದರು.

ಸಿದ್ದರಾಮಯ್ಯ ಸರಕಾರದ ಸಾಧನ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಿ ಅಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಸಮಾವೇಶ ಮಾಡುತ್ತಿದ್ದಾರೆ. ನೀವು ನಮ್ಮ ಪಕ್ಷಕ್ಕೆ ವೋಟ್ ಕೊಡಲೇಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಇದುವರೆಗೂ ಯಾವ ಮುಖ್ಯಮಂತ್ರಿಗಳು ಈ ರೀತಿ ಮಾಡಿಲ್ಲ ಎಂದು ದೇವೇಗೌಡ ಹೇಳಿದರು.

ಆಡಳಿತ ಯಂತ್ರವನ್ನು ಅಲಂಕರಿಸಿ ಸುಮ್ಮನೆ ಸಾವಿರಾರು ಕೋಟಿ ವೆಚ್ಚದ ಶಿಲಾನ್ಯಾಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 1.40 ಸಾವಿರ ಕೋಟಿ ರೂ.ಗಳ ಸಾಲದಲ್ಲಿದೆ. ಈ ರೀತಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತಿರೋ ಸಿಎಂ ಹಿಂದೇನು ಇರಲಿಲ್ಲ, ಮುಂದೇನು ಇರೋದಿಲ್ಲ ಎಂದು ಟೀಕಿಸಿದರು.

ಈ ಸಮಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಕೇಂದ್ರ ವಕೀಲರ ಪರಿಷತ್ತಿನ ಮಾಜಿ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಚಂದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News