ನಿಯಂತ್ರಣ ಕಳೆದುಕೊಂಡ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ

Update: 2018-01-07 16:58 GMT

ಬೀಜಿಂಗ್, ಜ. 7: ತನ್ನ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ಸಂಕೇತವಾಗಿದ್ದ ‘ಟಿಯಂಗಾಂಗ್-1’ ಬಾಹ್ಯಾಕಾಶ ಪ್ರಯೋಗಾಲಯದ ಮೇಲೆ ಚೀನಾ ನಿಯಂತ್ರಣ ಕಳೆದುಕೊಂಡಿದೆ. ಹಾಗಾಗಿ, 2011ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಲಾಗಿದ್ದ ಪ್ರಯೋಗಾಲಯವು ಮಾರ್ಚ್ ಕೊನೆಯ ವೇಳೆಗೆ ಭೂಮಿಗೆ ಅಪ್ಪಳಿಸಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

8,500 ಕೆಜಿ ತೂಕದ ಬಾಹ್ಯಾಕಾಶ ಪ್ರಯೋಗಾಲಯವು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಬಹುತೇಕ ಉರಿದು ಹೋಗುತ್ತದೆ ಹಾಗೂ ಅದರ ಕೆಲವು ಭಾಗಗಳು ಸಮುದ್ರಕ್ಕೆ ಬೀಳಲಿವೆ ಎಂದು ಪರಿಣತರನ್ನು ಉಲ್ಲೇಖಿಸಿ ಸಿಎನ್‌ಎನ್ ಸುದ್ದಿ ಚಾನೆಲ್ ವರದಿ ಮಾಡಿದೆ.

‘ಟಿಯಂಗಾಂಗ್-1’ ಅಥವಾ ‘ಸ್ವರ್ಗದ ಅರಮನೆ’ ಹೆಚ್ಚಿನ ಜನಸಾಂದ್ರತೆಯ ಪ್ರದೇಶದಲ್ಲಿ ಭೂಮಿಯನ್ನು ಪ್ರವೇಶಿಸಿ, ಅದರ ಕೆಲವು ದೊಡ್ಡ ಭಾಗಗಳು ಭೂಮಿಯ ಮೇಲೆ ಅಪ್ಪಳಿಸುವ ಸಾಧ್ಯತೆಯಿದೆ. ಇದರಿಂದಾಗಿ ಆಸ್ತಿಪಾಸ್ತಿಗಳಿಗೆ ಕೊಂಚ ಹಾನಿಯಾಗುವ ಸಾಧ್ಯತೆಯೂ ಇದೆ ಎಂದು ಹಾರ್ವರ್ಡ್-ಸ್ಮಿತ್‌ಸೋನಿಯನ್ ಸೆಂಟರ್ ಫಾರ್ ಆ್ಯಸ್ಟ್ರೊಫಿಸಿಕ್ಸ್‌ನಲ್ಲಿ ಖಗೋಳ ಭೌತಶಾಸ್ತ್ರ ವಿಜ್ಞಾನಿಯಾಗಿರುವ ಜೊನಾಥನ್ ಮೆಕ್‌ಡವೆಲ್ ಹೇಳಿದ್ದಾರೆ.

‘‘ಆದರೆ, ಬಾಹ್ಯಾಕಾಶ ಅವಶೇಷಗಳು ಭೂಮಿಯನ್ನು ಮರುಪ್ರವೇಶಿಸಲು ಆರಂಭಿಸಿದ ನಂತರದ 60 ವರ್ಷಗಳ ಇತಿಹಾಸದಲ್ಲಿ ಇಂಥ ಘಟನೆ ಸಂಭವಿಸಿಲ್ಲ. ಅವಶೇಷಗಳು ಜನವಸತಿ ಪ್ರದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ತುಂಬಾ ಕಡಿಮೆ’’ ಎಂದರು.

‘ಟಿಯಂಗಾಂಗ್-1’ ಮತ್ತು 2016ರಲ್ಲಿ ಉಡಾಯಿಸಲಾದ ‘ಟಿಯಂಗಾಂಗ್-2’ 2022ರ ಸುಮಾರಿಗೆ 20 ಟನ್ ತೂಕದ ಬಾಹ್ಯಾಕಾಶ ನಿಲ್ದಾಣವೊಂದನ್ನು ಕಕ್ಷೆಗೆ ಸೇರಿಸುವ ಚೀನಾದ ಯೋಜನೆಗಳ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News