ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಅಧ್ಯಕ್ಷರ ವಿರುದ್ಧ ಹೈಕೋರ್ಟ್‌ನಿಂದ ಜಾಮೀನು ಸಹಿತ ವಾರೆಂಟ್ ಜಾರಿ

Update: 2018-01-07 18:16 GMT

ಬೆಂಗಳೂರು, ಜ.7: ಮಹಿಳೆಯೊಬ್ಬರು ಹರಾಜಿನಲ್ಲಿ ಖರೀದಿಸಿದ್ದ ಸ್ಥಿರಾಸ್ತಿಗೆ ಸಂಬಂಧಿಸಿದ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಎರಡೂವರೆ ವರ್ಷದಿಂದ ಸತಾಯಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್(ಡಿಸಿಸಿ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ.

ಕೋಲಾರದ ನಿವಾಸಿ ರೂಪಶ್ರೀ ಎಂಬಾಕೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಈ ಇಬ್ಬರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.

2015ರ ಮಾರ್ಚ್ 25ರಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸ್ಥಿರಾಸ್ತಿಯೊಂದರ ಹರಾಜು ಪ್ರಕ್ರಿಯೆ ನಡೆಸಿತ್ತು. ಇದರಲ್ಲಿ ಭಾಗವಹಿಸಿದ್ದ ರೂಪಶ್ರೀ 10 ಲಕ್ಷ ರೂ.ಗೆ ಆ ಸ್ಥಿರಾಸ್ತಿಯನ್ನು ಖರೀದಿಸಿ, ಹಣ ಪಾವತಿಸಿದ್ದರು. ಆದರೆ, ಬ್ಯಾಂಕಿನವರು ಈವರೆಗೂ ಸ್ಥಿರಾಸ್ಥಿಯ ಕ್ರಯಪತ್ರವನ್ನು ರೂಪಶ್ರೀ ಹೆಸರಿಗೆ ನೋಂದಾಯಿಸಿಲ್ಲ. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ ರೂಪಶ್ರೀ ಸ್ಥಿರಾಸ್ತಿಯ ಕ್ರಯವನ್ನು ತನ್ನ ಹೆಸರಿಗೆ ನೋಂದಾಯಿಸಿಕೊಡಲು ಅಥವಾ ಹಣ ಮರುಪಾವತಿಸಲು ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಪ್ರಕರಣದ ಕುರಿತು ಈ ಹಿಂದೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದರೂ, ಯಾವುದೇ ಉತ್ತರ ನೀಡದಕ್ಕೆ ಅಧ್ಯಕ್ಷ ಹಾಗೂ ನಿದೇಶಕರ ವಿರುದ್ಧ ಜಾಮೀನು ಸಹಿತ ವಾರೆಂಟ್ ಜಾರಿಗೆ ಆದೇಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News