ಸಾಮಾನ್ಯ ವರ್ಗದವರಿಗೂ ಉಚಿತ ಲ್ಯಾಪ್‍ ಟಾಪ್: ಟಿ.ಬಿ ಜಯಚಂದ್ರ

Update: 2018-01-08 13:21 GMT

ತುಮಕೂರು,ಜ.08: ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಲ್ಯಾಪ್‍ಟಾಪನ್ನು ಮುಂದಿನ ವರ್ಷದಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ತುಮಕೂರು ಜಿಲ್ಲಾಡಳಿತ ಮತ್ತು ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 2016-17ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್‍ಗಳನ್ನು ವಿತರಿಸಿ ಮಾತನಾಡುತಿದ್ದ ಅವರು, ಇಡೀ ವಿಶ್ವದಲ್ಲೇ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಇಲ್ಲಿಯ ಬಡವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದ್ವಿತೀಯ ವರ್ಷದ ಪದವಿ ಮತ್ತು ಡಿಪ್ಲೋಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್‍ಗಳನ್ನು ವಿತರಿಸಲಾಗುತ್ತಿದ್ದು,ಈ ಸೌಲಭ್ಯವನ್ನು 2017-18ನೇ ಸಾಲಿನಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಈಗಾಗಲೇ ರೂ.225 ಕೋಟಿ ಗಳನ್ನು ಮೀಸಲಿಡಲಾಗಿದೆ ಎಂದರು. 

ಜಿಲ್ಲೆಯಲ್ಲಿ 19 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 2 ಸರಕಾರಿ ಪಾಲಿಟೆಕ್ನಿಕ್‍ಗಳ 1,676 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್‍ಗಳನ್ನು ವಿತರಿಸಲಾಗುತ್ತಿದೆ.ಇದರಿಂದ ಪ.ಜಾತಿ ಮತ್ತು ಪ.ಪಂಡದ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕವಾಗಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ನೆರವಾಗಲಿದೆ ಎಂದ ಸಚಿವರು, ಕರ್ನಾಟಕ ರಾಜ್ಯ ಸರಕಾರ ಕಳೆದ 4 ವರ್ಷಗಳಲ್ಲಿ ಪ.ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ 86 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು. 

ಸಮಾಜದಲ್ಲಿ ಎಲ್ಲರೂ ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದೇ ರಾಜ್ಯ ಸರಕಾರದ ಉದ್ದೇಶವಾಗಿದ್ದು,ಈ ಉದ್ದೇಶಕ್ಕಾಗಿ ಸರಕಾರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಟಾನಗೊಳಿಸುತ್ತಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.24.1ರಷ್ಟು ಪರಿಶಿಷ್ಟ ಜನಸಂಖ್ಯೆ ಇದ್ದು, ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಾ:ರಫೀಕ್ ಅಹಮ್ಮದ್  ಮಾತನಾಡಿ,ಕರ್ನಾಟಕ ಸರಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರಿವು, ವಿದ್ಯಾಸಿರಿ ಯೋಜನೆಗಳಲ್ಲದೆ ಇದೀಗ ಡಿಜಿಟಲ್ ತರಗತಿಗಳನ್ನೂ ಸಹ ಆರಂಭಿಸಲು ಮುಂದಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯೆಯ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಸಹ ಹೊಂದುವ ಮೂಲಕ ದೇಶದ, ಪ್ರಪಂಚದ ವಿವಿಧ ದೇಶಗಳಲ್ಲಿ ಕೆಲಸ ಮಾಡಲು ಶಕ್ತರಾಗಲಿದ್ದಾರೆ ಎಂದ ಶಾಸಕರು,ತಮ್ಮ ಕ್ಷೇತ್ರದಲ್ಲಿ ಪ್ರಸ್ತುತ 545 ಪ.ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್‍ಗಳನ್ನು ವಿತರಿಸುತ್ತಿರುವುದು ತಮಗೆ ಹರ್ಷ ತಂದಿದೆ ಎಂದರು. 

ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಲ್ಲೇಶ್ವರಪ್ಪ, ಜಂಟಿ ನಿರ್ದೇಶಕರಾದ ರಮೇಶ್‍ಬಾಬು,ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ,ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ: ದೇವರಾಜ್ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಪ್ರಾಂಶುಪಾಲ ಜಗದೀಶ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News