×
Ad

ಮೋದಿ ಸರಕಾರ ಬಂಡವಾಳಿಗರ ಸಾಲಮನ್ನಾವನ್ನೇ ಅಭಿವೃದ್ದಿ ಎಂದು ಬಿಂಬಿಸುತ್ತಿದೆ: ಶಶಿಧರ್ ಆಕ್ರೋಶ

Update: 2018-01-08 18:49 IST

ತುಮಕೂರು,ಜ.08: ಮೋದಿ ನೇತೃತ್ವದ ಕೇಂದ್ರ ಸರಕಾರವು ಬಂದು ಮೂರು ವರ್ಷಗಳು ಮುಗಿದರೂ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹದನವನ್ನು ಹೆಚ್ಚಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇವಲ ಶ್ರೀಮಂತ ಬಂಡವಾಳಗಾರರ ಸಾಲ ಮನ್ನಾ ಮಾಡುವುದನ್ನೇ ಅಭಿವೃದ್ಧಿ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಎಐಎಯುಟಿಸಿ ರಾಜ್ಯ ಉಪಾಧ್ಯಕ್ಷ ಶಶಿಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಟೌನ್‍ಹಾಲ್ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಘಟನೆ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡುತಿದ್ದ ಅವರು, ಮುಂದಿನ ದಿನಗಳು ಕಾರ್ಮಿಕರ, ದುಡಿಯುವ ಜನರ, ರೈತಾಪಿ ಜನರ ಪಾಲಿಗೆ ಕಷ್ಟಕರವಾಗಿ ಪರಿಣಮಿಸುತ್ತವೆ.ಇದನ್ನು ಎದುರಿಸಲು ಬಲಿಷ್ಠ ಸಂಘಟನೆಯನ್ನು ಆಶಾ ಕಾರ್ಯಕರ್ತೆಯರು ಕಟ್ಟಬೇಕಿದೆ ಎಂದರು.

ನೋಟ್ ಬಂದ್ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದ ಮೋದಿಯವರು ಯಾವುದೇ ಕಟ್ಟು ಹಣವನ್ನು ಹೊರ ತೆಗೆಯಲಿಲ್ಲ, ಜಿಎಸ್‍ಟಿ ಹೆಸರಿನಲ್ಲಿ ತೆರಿಗೆಯನ್ನು ಏರಿಸಿ ಜನರ ಮೇಲೆ ಹೊರೆಯನ್ನು ಹೊರಿಸಲಾಗಿದೆ.ಈಗ ಐಸಿಡಿಎಸ್ ಯೋಜನೆಗೆ ಹಣ ಕಡಿತಗೊಳಿಸಿ ಇಡೀ ಯೋಜನೆಯನ್ನು ರಾಜ್ಯ ಸರಕಾರಗಳ ಮೇಲೆ ಹಾಕಲಾಗಿದೆ.ಇದರ ಫಲವಾಗಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಬೀಳುವ ಪರಿಸ್ಥಿತಿಯನ್ನು ಮೋದಿಯವರು ನಿರ್ಮಿಸಿದ್ದಾರೆ. ಇದೇ ಪರಿಸ್ಥಿತಿ ಎಲ್ಲ ಜನಪರ ಯೋಜನೆಗಳಿಗೆ ಬರಬಹುದು. ಏಕೆಂದರೆ ಮೋದಿ ನೇತೃತ್ವದ ಸರಕಾರದ ನೀತಿಯೇ ಕಾರ್ಮಿಕ ವಿರೋಧಿ ನೀತಿ. ಹಾಗಾಗಿ  ಇದೇ ತಿಂಗಳ 17 ರಂದು ದೇಶವ್ಯಾಪಿ ಸ್ಕೀಮ್ ನೌಕರರಾದ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ತಮ್ಮ ಕೆಲಸವನ್ನು ನಿಲ್ಲಿಸಿ ಮುಷ್ಕರವನ್ನು ನಡೆಸಲು ಎಐಯುಟಿಯುಸಿ ಸೇರಿದಂತೆ ಕಾರ್ಮಿಕ ಸಂಘಗಳು ಕರೆ ನೀಡಿವೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಜನವರಿ 17 ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಮುಷ್ಕರ ನಡೆಸಿ ಕೇಂದ್ರ ಸರಕಾರವನ್ನೆಚ್ಚರಿಸಬೇಕು ಎಂದು ಕರೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಡಿ ನಾಗಲಕ್ಷ್ಮಿ,ಐತಿಹಾಸಿಕ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಿದ ಆಶಾ ಕಾರ್ಯಕರ್ತೆಯರು ಇಡೀ ಕಾರ್ಮಿಕ ಹೋರಾಟಕ್ಕೆ ಹೊಸ ಚೈತನ್ಯವನ್ನು ತುಂಬಿದ್ದಾರೆ. ಹಾಗೆಯೇ ಸರಕಾರ ಆಶಾ ಕಾರ್ಯಕರ್ತೆಯರ ಮನವಿಯನ್ನು ಪರಿಗಣಿಸಿ ನಿಗದಿತ ಪ್ರೋತ್ಸಾಹಧನವನ್ನು ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಅದಕ್ಕಾಗಿ ಇಡೀ ಆಶಾ ಕಾರ್ಯಕರ್ತೆಯರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ನಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನಿಗದಿತ ಗೌರವ ಧನ ನೀಡುತ್ತಿರುವುದು ಸಂತಸದ ವಿಷಯವಾದರೂ ನಾವು ಕೇಳಿದ 6000 ರೂ ನಿಗದಿತ ವೇತನ ಸಿಗಬೇಕಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಳ ಮಾಡುವುದಾಗಿ ಸರಕಾರ ಭರವಸೆ ನೀಡಿದೆ. ಹಾಗೆಯೇ ವಸತಿ ರಹಿತ ಆಶಾಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ಅವರು,ಮುಖ್ಯಮತ್ರಿಗಳನ್ನು ಹಾಗೂ ಆರೋಗ್ಯ ಸಚಿವರನ್ನು ಎಲ್ಲಾ ಆಶಾ ಕಾರ್ಯಕರ್ತೆಯರ ಪರವಾಗಿ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ,ಆಶಾ ಕಾರ್ಯಕರ್ತೆಯರು ನಡೆಸಿದ ಹೋರಾಟವನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಹ ಹೋರಾಟವನ್ನು ಕಟ್ಟಿದ್ದೀರಿ. ಗ್ರಾಮೀಣ ಭಾಗದಲ್ಲಿ ಅಮೂಲ್ಯ ಸೇವೆಯನ್ನು ನೀವು ಸಲ್ಲಿಸುತ್ತಿದ್ದೀರಿ. ಅದರ ಮೂಲಕ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುತ್ತಿದ್ದೀರಿ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಬಳಿ ಹಾಗೂ ಆರೋಗಯ ಸಚಿವರ ಬಳಿ ವಯಕ್ತಿಕವಾಗಿ ನಾನು ನಿಮ್ಮ ಪರವಾಗಿ ಮಾತನಾಡುತ್ತೇನೆ. ಖಂಡಿತವಾಗಿಯೂ ನಿಮ್ಮ ಪ್ರಯತ್ನ ಸಫಲವಾಗುವ ನಿಟ್ಟಿನಲ್ಲಿ ನಾನೂ ಹಾಗೂ ರಫೀಕ್ ಅಹಮದ್ ಇಬ್ಬರೂ ಪ್ರಯತ್ನಿಸುತ್ತೇವೆ ಎಂದರು.

ಎಐಎಂಎಸ್‍ಎಸ್ ಮಹಿಳಾ ಸಂಘದ ಜಿಲ್ಲಾ ಸಂಘಟಕರಾದ ಶ್ರೀಮತಿ ಮಂಜುಳ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ವಿ.ರಂಗಸ್ವಾಮಿ ಮಾತನಾಡಿದರು.ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷರಾದ ನರಸಿಂಹರಾಜು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News