ಮದ್ಯಪಾನ ಮುಕ್ತ ರಾಜ್ಯಕ್ಕಾಗಿ ಸ್ತ್ರೀಶಕ್ತಿ ಸಂಘಗಳು ಮುಂದಾಗಬೇಕು: ಟಿ.ಬಿ. ಜಯಚಂದ್ರ

Update: 2018-01-08 13:24 GMT

ತುಮಕೂರು,ಜ.08: ಮನೆಗಳಲ್ಲಿ ಗಂಡ,ಮಕ್ಕಳು,ಸಹೋದರರಿಗೆ ಮದ್ಯಪಾನದ ದುಷ್ಪರಿಣಾಮಗಳನ್ನು ತಿಳಿಸುವ ಮೂಲಕ ಮಹಿಳೆಯರನ್ನು ರಾಜ್ಯವನ್ನು ಮದ್ಯಪಾನ ಮುಕ್ತ ರಾಜ್ಯವಾಗಿಸಲು ಮುಂದಾಗುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮನವಿ ಮಾಡಿದ್ದಾರೆ.

ನಗರದ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕರ್ನಾಟಕ ರಾಜ್ಯವನ್ನು ಮದ್ಯಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ದಿಸೆಯಲ್ಲಿ ಪ್ರತಿಯೊಂದು ಕುಟುಂಬದ ಸ್ತ್ರೀಯರು ಹಾಗೂ ಸ್ತ್ರೀಶಕ್ತಿ ಸಂಘಗಳು ತಮ್ಮ ಮನೆಗಳಿಂದಲೇ ತಮ್ಮ ಪತಿ,ಮಗ,ತಮ್ಮ ಇತರರಿಗೆ ಮದ್ಯಪಾನದ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.

ಮಹಾತ್ಮಗಾಂಧೀಜಿಯವರ ನಂತರ ಕರ್ನಾಟಕದಲ್ಲಿ ಮದ್ಯಪಾನ ವಿರುದ್ದ ಹಾಗೂ ದುಶ್ಚಟಗಳ ವಿರುದ್ಧ ನಿರಂತರ ಆಂದೋಲನಗಳನ್ನು ನಡೆಸುತ್ತಿರುವ ಧರ್ಮಸ್ಥಳದ ಡಾ:ವೀರೇಂದ್ರ ಹೆಗಡೆ ಅವರು,ಇಲ್ಲಿಯವರೆಗೂ 86 ಸಾವಿರಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿಸಿದ್ದಾರೆ.ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ಮದ್ಯಪಾನದ ಬಗ್ಗೆ ಅರಿವು ಮೂಡಿಸಿ ಅವರನ್ನು ಮದ್ಯಪಾನದಿಂದ ದೂರವಿರುವಂತೆ ಮಾಡಬೇಕೆಂದು ಕರೆ ನೀಡಿದರು.  

ಸಮಾರಂಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಂಜುನಾಥ್, ಹದಿಹರೆಯದರವರಲ್ಲಿ ಮನಸ್ಸು ಚಂಚಲವಾಗಿದ್ದು,ಈ ವಯಸ್ಸಿನಲ್ಲಿ ಮಕ್ಕಳು ಜಾಗೃತರಾಗಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಮತ್ತು ವಸ್ತುಗಳಿಂದ ದೂರ ಉಳಿಯಬೇಕೆಂದರು.

ಸಮಾರಂಭದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಹೆಚ್.ಸಿ.ರುದ್ರಪ್ಪ ಅವರು ವಹಿಸಿದ್ದರು.  ಕೃಷಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷರಾದ ಗಂಗಾಧರಪ್ಪ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ಪುರುಷೋತ್ತಮ್, ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಮುಂತಾದವರು ಹಾಜರಿದ್ದರು.ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ವಿ.ಪಾತರಾಜು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News