ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ : ಕೊಲೆ ಪ್ರಕರಣ ದಾಖಲು
ಶಿವಮೊಗ್ಗ, ಜ. 8: ಜಿಲ್ಲೆಯ ಭದ್ರಾವತಿ ತಾಲೂಕಿನ ರಾಮನಕೊಪ್ಪದ ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಮಹಿಳೆಯೋರ್ವರ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ.
ಮೃತ ಮಹಿಳೆಗೆ ಸುಮಾರು 30 ರಿಂದ 40 ವರ್ಷ ವಯೋಮಾನವಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಶವ ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯು ನೀಲಿ ಸೀರೆ, ರವಿಕೆ ಧರಿಸಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನಿಗೂಢ: ಮೃತ ಮಹಿಳೆಯ ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಹಿಡಿಯುವುದು ಕಷ್ಟಕರವಾಗಿದೆ. ಹಾಗೆಯೇ ಮಹಿಳೆಯ ಸಾವು ಸಂಭವಿಸಿದ್ದು ಹೇಗೆಂಬುವುದು ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೆ ಸ್ಪಷ್ಟವಾಗಬೇಕಾಗಿದೆ. ಕೊಲೆ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ಹೊರಬರಬೇಕಾಗಿದೆ.