×
Ad

'ಹುಚ್ಚನ ಕೈಯಲ್ಲಿ ಆಡಳಿತ, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂಗಿದೆ' : ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ

Update: 2018-01-08 19:21 IST

ಶಿವಮೊಗ್ಗ, ಜ. 8: 'ಮುಖ್ಯಮಂತ್ರಿ ಸಿದ್ದರಾಮಯ್ಯರ ಆಡಳಿತ ವೈಖರಿ ಗಮನಿಸಿದರೆ ಹುಚ್ಚನ ಕೈಯಲ್ಲಿ ಆಡಳಿತ ಕೊಟ್ಟಂಗಿದೆ. ಸಾಧನಾ ಸಮಾವೇಶದ ಹೆಸರಿನಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹುಚ್ಚು ಸಮಾವೇಶ ನಡೆಸುತ್ತಿದ್ದಾರೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಕಾಂಗ್ರೆಸ್‍ನವರಿಗೆ ಅಧಿಕಾರ ಕೊಟ್ಟಂತಾಗಿದೆ. ಹುಚ್ಚನ ಕೈಯಲ್ಲಿ ಅಧಿಕಾರ ಕೊಟ್ಟ ಪರಿಣಾಮ ಇದೆಲ್ಲ ನೋಡಬೇಕಾಗಿದೆ. ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದ ಮುಖ್ಯಮಂತ್ರಿಯೋರ್ವರನ್ನು ತಾವು ಇದೇ ಮೊದಲ ಬಾರಿಗೆ ನೋಡುತ್ತಿದ್ದೆನೆ. ಸರ್ಕಾರಿ ಅಧಿಕಾರಿಗಳನ್ನೇ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು. 

ಬೈಯುವ ಸಮಾವೇಶ: ಸಾಧನಾ ಸಮಾವೇಶವನ್ನು ಜನರ ಹಣದಲ್ಲಿ ಮುಖ್ಯಮಂತ್ರಿಗಳು ನಡೆಸುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಏನು ಸಾಧನೆ ಮಾಡಿದ್ದೆನೆ ಎಂಬುವುದನ್ನು ಹೇಳುವುದು ಬಿಟ್ಟು, ಬರೀ ವಿಪಕ್ಷಗಳ ವಿರುದ್ದದ ಟೀಕೆಗೆ ವೇದಿಕೆ ಬಳಕೆ ಮಾಡುತ್ತಿದ್ದಾರೆ. ಸರ್ಕಾರದ ಹಣವನ್ನು ತಮ್ಮ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. 

ಸಾಧನಾ ಸಮಾವೇಶವು ರಾಜ್ಯದ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕೆಯಾಗಿದೆ. ನೀರಾವರಿ ಯೋಜನೆಗಳಿಗೆ ಎಷ್ಟು ಹಣ ನೀಡಲಾಗಿದೆ, ಎಷ್ಟು ಬಡವರಿಗೆ ಮನೆ ಕೊಡಲಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂಬುವುದನ್ನು ಸಮಾವೇಶದಲ್ಲೆಲ್ಲೂ ಸಿಎಂ ಹೇಳುತ್ತಿಲ್ಲ. ಇವರ ಸಾಧನೆ ಶೂನ್ಯವಾಗಿದೆ ಎಂದು ಟೀಕಿಸಿದರು. 

ಸಿಎಂ ಸಿದ್ದರಾಮಯ್ಯರವರು ಕೊಲೆಗಡುಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸಮಾಜ ಒಡೆಯುವ ಕೆಲಸ ನಡೆಸುತ್ತಿದ್ದಾರೆ. ಈ ಮೂಲಕ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅಕ್ಷರಶಃ ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಪರಿಣಮಿಸಿದೆ. ಕಾನೂನು-ಸುವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಬಿಜೆಪಿ ಎಲ್ಲ ಜಾತಿಯವರನ್ನು ಒಂದೇ ರೀತಿ ಕಾಣುತ್ತದೆ. ಆದರೆ ಕಾಂಗ್ರೆಸ್ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ. ಹಿಂದೂಗಳ ಹೆಣದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ ಅವರು, 'ನೆಹರೂ, ಇಂದಿರಾಗಾಂಧಿಯವರಿಂದಲೇ ಆರೆಸ್ಸೆಸ್ , ಬಿಜೆಪಿ, ವಿಎಚ್‍ಪಿಗಳನ್ನು ನಿಷೇಧಿಸಲು ಆಗಿಲ್ಲ. ಇನ್ನೂ ಇವರ ಕೈಯಲ್ಲಿ ಏನಾಗಲಿದೆ?' ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News