ಬಹುಜನ ಕಾರ್ಮಿಕ ಸಂಘದಿಂದ ಪ್ರತಿಭಟನೆ: ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ನೀಡುವ ಭರವಸೆ
ಮಡಿಕೇರಿ, ಜ.8: ಹೊದ್ದೂರು ಪಂಚಾಯತ್ ವ್ಯಾಪ್ತಿಯ ಪಾಲೆಮಾಡಿನಲ್ಲಿ ನೆಲೆಸಿರುವ 260ಕ್ಕೂ ಹೆಚ್ಚಿನ ಕುಟುಂಬಗಳಿಗೆ 94ಸಿ ಮೂಲಕ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಬಹುಜನ ಕಾರ್ಮಿಕ ಸಂಘ ಹಾಗೂ ಪಾಲೇಮಾಡು ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಹಕ್ಕುಪತ್ರ ನೀಡಲು ಮುಂದಿನ ಎರಡು ವಾರಗಳಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ ಪಾಲೇಮಾಡು ನಿವಾಸಿಗಳು ಜನವರಿ 9 ರಂದು ಮುಖ್ಯಮಂತ್ರಿಗಳ ಆಗಮನದ ಸಂದರ್ಭ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು.
2010 ರಲ್ಲಿ ಪಾಲೇಮಾಡು ನಿವಾಸಿಗಳಿಗೆ ಹೊದ್ದೂರು ಪಂಚಾಯತ್ ಗೆ ಸಂಬಂಧಿಸಿದಂತೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಹೀಗಿದ್ದೂ ಕಂದಾಯ ಅಧಿಕಾರಿಗಳು ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷರಾದ ಕೆ.ಮೊಣ್ಣ್ಣಪ್ಪ ಆರೋಪಿಸಿದರು.
ಪಾಲೆಮಾಡು ಸ್ಮಶಾನದ ಜಾಗದ ವಿವಾದವನ್ನು ಕೂಡ ಬಗೆಹರಿಸಬೇಕೆಂದು ಒತ್ತಾಯಿಸಿದ ಅವರು, 2 ಏಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಬೇಕು. ಪಾಲೆಮಾಡು ನಿವಾಸಿಗಳಿಗೆ 94ಸಿಯಡಿ ಹಕ್ಕುಪತ್ರ ನೀಡಬೇಕು. ಪಾಲೆಮಾಡಿನಲ್ಲಿ ಕ್ರೀಡಾಂಗಣ ಸಂಸ್ಥೆ ಹಾಕಿರುವ ಬೇಲಿ ತೆರವುಗೊಳಿಸಿ ಸ್ಮಶಾನಕ್ಕೆ ಜಾಗವನ್ನು ದುರಸ್ತಿ ಪಡಿಸಬೇಕು, ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಜಿಲ್ಲಾಡಳಿತ ಒದಗಿಸಬೇಕು. ವೀರಾಜಪೇಟೆ ತಾಲೂಕಿನ ಪೆರುಂಬಾಡಿಯಲ್ಲಿ ಪರಿಶಿಷ್ಟರಿಗೆ ಮಂಜೂರಾದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕು, ಪೆರುಂಬಾಡಿಯ ತೆರ್ಮೆಕಾಡು ಪೈಸಾರಿಯ ಅಂದಾಜು ನೂರು ಪರಿಶಿಷ್ಟ ಕುಟುಂಬಗಳಿಗೆ ಜಾಗವನ್ನು ಮಂಜೂರು ಮಾಡಿಕೊಡಬೇಕು. ಚೆರಿಯಪರಂಬು ನಿವಾಸಿಗಳಿಗೆ 94ಸಿ ಯಡಿ ಜಾಗ ಮಂಜೂರು ಮಾಡಿಕೊಡಬೇಕೆಂದು ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷರಾದ ಕುಸುಮಾವತಿ ಆಗ್ರಹಿಸಿದರು.
ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಪ್ರತಿಭಟನಾಕಾರರು ಮಾಡಿದರಾದರೂ ಸ್ಥಳಕ್ಕೆ ಆಗಮಿಸಿದ ಸಚಿವ ಎಂ.ಆರ್.ಸೀತಾರಾಮ್ ಅವರು ಪಾಲೇಮಾಡು ನಿವಾಸಿಗಳೊಂದಿಗೆ ಚರ್ಚಿಸಿ ಹಕ್ಕುಪತ್ರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ 15 ದಿನಗಳಲ್ಲಿ ನಾನೇ ಖುದ್ದು ಪಾಲೇಮಾಡಿಗೆ ಭೇಟಿ ನೀಡಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.
ನಂತರ ಪ್ರತಿಭಟನೆಯಿಂದ ಹಿಂದೆ ಸರಿದ ಪ್ರಮುಖರು ತಾತ್ಕಾಲಿಕವಾಗಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದು, ಸಚಿವರ ಭರವಸೆ ಈಡೇರದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಇಂದು ಮುಖ್ಯಮಂತ್ರಿಗೆ ಮನವಿ:
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಬಹುಜನ ಕಾರ್ಮಿಕರ ಸಂಘದ ಐವರು ಮುಖಂಡರಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಜ.9 ರಂದು ಮನವಿ ಸಲ್ಲಿಸಿ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗುವುದೆಂದು ಕೆ.ಮೊಣ್ಣಪ್ಪ ತಿಳಿಸಿದರು.
ಪ್ರಮುಖರಾದ ಎಂ.ಎಸ್.ಆನಂದ, ರಾಜು ಪಿ.ವಿ., ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.