×
Ad

ಧನ್ಯಾ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‍ನಿಂದ ಪ್ರತಿಭಟನೆ

Update: 2018-01-08 21:05 IST

ಮೂಡಿಗೆರೆ, ಜ.8: ಧನ್ಯಾ ಆತ್ಮಹತ್ಯೆಗೆ ಕಾರಣವಾಗಿರುವ ಆರೋಪಿಗಳು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಟ್ಟಣದ ಲಯನ್ಸ್ ವೃತ್ತದಲ್ಲಿ ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಲಾಯಿತು. 

ಈ ವೇಳೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಮಾತನಾಡಿ, ಧನ್ಯಾ ಪ್ರಕರಣದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ 5 ಮಂದಿ ಆರೋಪಿಗಳಿದ್ದಾರೆ. ಅದರಲ್ಲಿ ಪೊಲೀಸರು ಒಬ್ಬನನ್ನು ಮಾತ್ರ ಬಂಧಿಸಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಿಗೆ ಕಾಣದ ಕೈಗಳು ರಕ್ಷಣೆ ನೀಡುತ್ತಿರುವುದರಿಂದ ಬಂಧಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಆರೋಪಿಗಳನ್ನು ಬಂಧಿಸಿ ಧನ್ಯಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. 

ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಮಾತನಾಡಿ, ಸಂಘ ಪರಿವಾರಕ್ಕೆ ಮಾಡಲು ಕೆಲಸವಿಲ್ಲ. ಕರಾವಳಿ ಸೇರಿದಂತೆ ಎಲ್ಲಾ ಕಡೆಯಲ್ಲಿಯೂ ಕೋಮು ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಇಂತಹ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧ ಮಾಡದಿದ್ದರೆ ಸಮಾಜದಲ್ಲಿ ಶಾಂತಿ ಕಾಣಲು ಸಾಧ್ಯವಾಗುವುದಿಲ್ಲ. ಮೂಡಿಗೆರೆಯಲ್ಲಿ ಎಲ್ಲಾ ಧರ್ಮಿಯರು ಸೌಹಾರ್ಧತೆಯಿಂದ ಇದ್ದಾರೆ. ಇವರ ಗಾಳಿ ಇಲ್ಲಿಗೆ ಸೋಂಕುವ ಮುನ್ನ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಇರ್ಷಾಧ್, ಎಸ್ಸೀ ಎಸ್ಟಿ ವಿಭಾಗದ ತಾಲೂಕು ಅಧ್ಯಕ್ಷ ಸುರೇಶ್, ಕಸಬಾ ಹೋಬಳಿ ಅಧ್ಯಕ್ಷ ಯಾಕೂಬ್, ರಾಹುಲ್ ಬ್ರಿಗೇಡ್‍ನ ಆದರ್ಶ್, ಮುಖಂಡರಾದ ಚಂದ್ರೇಶ್, ಅಬೂಬಕರ್, ದೀಕ್ಷಿತ್ ರಮೇಶ್, ನಿಶಾಂತ್ ಪಟೇಲ್, ಮೊಹಿದ್ದೀನ್ ಸೇಟ್, ಅಜ್ಜು, ಕಣಚೂರು ದೀಕ್ಷಿತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News