ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
ಚಿಕ್ಕಮಗಳೂರು, ಜ.8:ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಸಂಜೆ ನಗರದ ಆಜಾದ್ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು.
ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಕೊಲೆ ಸುಲಿಗೆಗಳು, ಅತ್ಯಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಅಲ್ಲದೆ ಇದನ್ನು ಖಂಡಿಸಿ ನಡೆಯುತ್ತಿರುವ ದಲಿತ ಹೋರಾಟಗಳು ಮತ್ತು ಸಮಾವೇಶಗಳನ್ನು, ಬರಹಗಾರರು, ದಲಿತ ಸಂಸ್ಕೃತಿ, ಶಿಕ್ಷಣ, ಉದ್ಯೋಗಗಳ ಮೇಲೆ ಸಹ ಮತೀಯವಾದಿಗಳು ದಾಳಿ ಮಾಡಲು ಮುಂದಾಗಿರುವ ಕ್ರಮ ನೋಡಿದರೆ ದಲಿತರ ಏಳಿಗೆಯನ್ನು ಸಹಿಸಲಾಗದ ಈ ಶಕ್ತಿಗಳು ಮತ್ತೆ ದಲಿತರನ್ನು ಗುಲಾಮಗಿರಿಗೆ ತಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ. ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನಾಕಾರರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಊಳಿಗಮಾನ್ಯ ಮತ್ತು ಮತೀಯವಾದಿ ಶಕ್ತಿಗಳ ವಿರುದ್ದ ಘೋಷಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ದಲಿತ ಜಾಗೃತಿಯ ಕೆ.ಜೆ.ಮಂಜು, ವಿದ್ಯಾರ್ಥಿ ಸಂಘದ ಲೋಕೇಶ್ ಮಾವಿನಗುಣಿ, ಜೆವೈವಿವಿಯ ಅಂಗಡಿ ಚಂದ್ರು, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಕೆ.ಎಚ್.ಯಶೋದರ್, ವಸಂತಕುಮಾರ್, ಹೊನ್ನೇಶ್, ಉದ್ದಪ್ಪ, ಸುರೇಶ, ಕೋಮು ಸೌಹಾರ್ಧ ವೇದಿಕೆಯ ಪಿ.ಕೆ.ಹಸನಬ್ಬ ಮತ್ತಿತರರಿದ್ದರು.
‘ಮೂಡಿಗೆರೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ವಿದ್ಯಾರ್ಥಿನಿಯೋರ್ವಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಆರೋಪಿಗಳಲ್ಲಿ ಓರ್ವನನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಸರಕಾರ ಕ್ರಮ ಜರುಗಿಸಬೇಕು. ಆತ್ಮಹತ್ಯೆ ಮಾಡಿಕೊಂಡ ಧನ್ಯಾಳ ಕುಟುಂಬಕ್ಕೆ ಪರಿಹಾರ ನೀಡಬೇಕು’
- ಗೌಸ್ ಮೊಹಿದ್ದೀನ್, ಜನಶಕ್ತಿ ರಾಜ್ಯ ಸಂಚಾಲಕ