ರೈತರ ಕಡೆಗಣಿಸಿ ಉದ್ಯಮಿಗಳ ರಕ್ಷಣೆ ಮಾಡುತ್ತಿರುವ ಪ್ರಧಾನಿ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಆಕ್ರೋಶ
ಮಂಡ್ಯ, ಜ.8: ರೈತರು ನೋವುಗಳಿಗೆ ಸರಕಾರಗಳು ಕಿವಿಗೊಡುತ್ತಿಲ್ಲ. ದೇಶದ ಜನರ ಹಸಿವು ನೀಗಿಸುವ ರೈತರು ಶವಸಂಸ್ಕಾರಕ್ಕೂ ಹಣವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ ಎಂದು ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಶ್ರೀರಂಗಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ ನಿರಂತರ ಧರಣಿ ಕೈಗೊಂಡಿರುವ ರೈತರಿಗೆ ಬೆಂಬಲ ನೀಡಿ ಮಾತನಾಡಿದ ಅವರು, ರೈತರ ಹೆಸರೇಳಿಕೊಂಡು ಅಧಿಕಾರ ನಡೆಸುವ ಸರಕಾರಗಳು ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಅಮೇರಿಕಾ, ಮೊದಲಾದ ದೊಡ್ಡ ದೇಶಗಳಿಗೆ ಭೇಟಿ ನೀಡಿ ಉದ್ದುದ್ದ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರಮೋದಿ ರೈತರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ಉದ್ಯಮಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಅವರು ಕಿಡಿಕಾರಿದರು.
ಕೆಆರ್‍ಎಸ್‍ನಿಂದ ಬೇಸಗೆ ಬೆಳೆಗೆ ನೀರು ಹರಿಸಬೇಕು. ಬಾಕಿ ಇರುವ ರೈತರ ಬೆಳೆನಷ್ಟ ಪರಿಹಾರ ಬಿಡುಗಡೆ ಮಾಡಬೇಕು. ಬಿತ್ತನೆ ಬೀಜ ಕೊಡಬೆಕು. ಸಾಲ ವಸೂಲಾತಿ, ಚಿನ್ನಾಭರಣ ಹರಾಜು ಮಾಡದಂತೆ ಬ್ಯಾಂಕ್‍ಗಳಿಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.
ಬ್ಯಾಂಕ್‍ನಿಂದ ನೊಟೀಸ್ ಜಾರಿಮಾಡಿದರೆ ಉಗ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಕೇಂದ್ರ ಸರಕಾರ ಮಧ್ಯೆಪ್ರವೇಶಿಸಿ ರೈತರ ಸಮಸ್ಯೆಗಳನ್ನು ಹೋಗಲಾಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಕೆ.ಶೆಟ್ಟಹಳ್ಳಿ ಶ್ರೀಕಂಠಯ್ಯ, ಉಪಾಧ್ಯಕ್ಷ ನಾಗೇಂದ್ರಸ್ವಾಮಿ., ಮಂಜೇಶ್‍ಗೌಡ, ಮೇಳಾಪುರ ಸ್ವಾಮೀಗೌಡ, ರಮೇಶ್, ಕೃಷ್ಣೇಗೌಡ, ಎಂ.ಶೆಟ್ಟಹಳ್ಳಿ ಶ್ರೀನಿವಾಸ್, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.