×
Ad

ರೈತರಿಂದ ಬಲವಂತದ ಸಾಲ ವಸೂಲಾತಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ: ಸಚಿನ್‍ಮೀಗಾ ಎಚ್ಚರಿಕೆ

Update: 2018-01-08 23:51 IST

ಚಿಕ್ಕಮಗಳೂರು, ಜ.8: ಉಧ್ಯಮಿಗಳ ಸಾಲ ಮನ್ನಾ ಮಾಡಿ ರೈತರ ಸಾಲವನ್ನು ಬಲವಂತವಾಗಿ ವಸೂಲಾತಿ ಮಾಡುತ್ತಿರುವ ಕೇಂದ್ರದ ನಿರ್ಧಾರವನ್ನು ಖಂಡಿಸುತ್ತಿದ್ದು, ಬ್ಯಾಂಕುಗಳು ಸಾಲ ವಸೂಲಾತಿಗೆ ಬಲವಂತ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಎಚ್ಚರಿಸಿದರು.

ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದೇಶಾದ್ಯಂತ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಣಾಮ ಜತೆಗೆ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಮನ್ನಾಗೊಳಿಸಲು ಕೇಂದ್ರ ಬಿಜೆಪಿ ಸರಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಈಗಾಗಲೇ ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾಗೊಳಿಸಿದ್ದಾರೆ ಎಂದು ಹೇಳಿದರು.

ರೈತರು ಬ್ಯಾಂಕುಗಳಲ್ಲಿ ಓಟಿಎಸ್ ಮೂಲಕ ಸಾಲ ಮರುಪಾವತಿಸಲು ಅವಕಾಶವಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳ ಮೂಲಕ ರೈತರ ಬಲವಂತದ ಸಾಲ ವಸೂಲಾತಿಗೆ ಮುಂದಾಗಿದೆ. ದೇಶದಲಿ ಸುಮಾರು 1463 ಬ್ಯಾಂಕು ಖಾತೆಗಳು 100 ಕೋಟಿಗೂ ಅಧಿಕ ಸಾಲವನ್ನು ಪಡೆದು 21 ಬ್ಯಾಂಕ್‍ಗಳು ಎನ್‍ಪಿಎಗೊಂಡಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಇಂತಹ ದೊಡ್ಡ ಸಾಲಗಳನ್ನು ವಸೂಲು ಮಾಡುತ್ತಿಲ್ಲ ಎಂದು ಆರೋಪಿಸಿದರು.

ಬ್ಯಾಂಕುಗಳ ನಷ್ಟವನ್ನು ತುಂಬಲು ಕಳೆದ ವರ್ಷ ಅಯವ್ಯಯದಲ್ಲಿ ಬ್ಯಾಂಕ್‍ಗಳ ಪುನಶ್ಚೇತನಕ್ಕೆ ಕೇಂದ್ರ ಸರಕಾರ 2.12 ಲಕ್ಷ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.ಆದರೆ ಬಡ ರೈತರ ಪಡೆದಿರುವ ಸಣ್ಣಪುಟ್ಟ ಸಾಲವನ್ನು ಕೇಂದ್ರ ಸರಕಾರ ವಸೂಲು ಮಾಡುತ್ತಿವೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಬೆಳೆನಷ್ಟ ಮತ್ತು ಬಲವಂತದ ವಸೂಲಾತಿಯಿಂದ ಆತಂಕದಲ್ಲಿದ್ದಾರೆ. ಮೂಲ ಸಾಲದ ಮೊತ್ತದ ಐದು ಪಟ್ಟು ಹೆಚ್ಷಾಗಿದೆ ಎಂದು ದೂರಿದರು.

ಬ್ಯಾಂಕುಗಳ ವ್ಯವಸ್ಥಾಪಕರು ಅಮಾಯಕ ರೈತರಿಗೆ ನಿಮ್ಮನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ, ಆಸ್ತಿಯನ್ನು ಹರಾಜು ಮಾಡುವುದಾಗಿ ಬೆದರಿಸಿ ಸಾಲ ವಸೂಲಾತಿಗೆ ನಿಂತಿದ್ದಾರೆ. ಈ ಬಗ್ಗೆ ಸಾವಿರಾರು ರೈತರು ದಿಗಿಲುಗೊಂಡಿದ್ದಾರೆ. ಈಗಾಗಲೇ ತಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಗೊರಕ್ ಸಿಂಗ್ ವರದಿ ಆಧರಿಸಿ ಸಾಲ ಮನ್ನಾ ಮಾಡುವಂತೆ ಎಸ್‍ಎಲ್‍ಸಿ ಹೂಡಿದ್ದು, ಚೆನ್ನೈನ ರೈತರು ಊಡಿರುವ ಕೇಸನ್ನು ಒಂದೇ ಕೇಸಿನಡಿ ತರಲಾಗಿದೆ ಎಂದು ವಿವರ ನೀಡಿದರು.

ಕಳೆದ ತಿಂಗಳು ಸವೋಚ್ಚ ನ್ಯಾಯಾಲಯವು ರೈತರಿಂದ ಬಲವಂತದ ಸಾಲ ವಸೂಲಾತಿ ನಡೆಸದಂತೆ ಸೂಚಿಸಿದೆ. ಈ ಬಗ್ಗೆ ಕೆಪಿಸಿಸಿ ಕಿಸಾನ್‍ಸೆಲ್ ಎಚ್ಚರ ವಹಿಸಿದ್ದು ರೈತರ ಹಿತಕ್ಕೆ ಧಕ್ಕೆಯುಂಟು ಮಾಡಿದರೆ ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಮಯದಲ್ಲಿ ಅಕ್ಮಲ್, ನಯಾಝ್, ಪ್ರಸಾದ್ ಅಮೀನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News