×
Ad

“ಸಚಿವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು”

Update: 2018-01-09 19:07 IST

ಮೂಡಿಗೆರೆ, ಜ.7: ಬಿಲ್ಲವ, ಈಡಿಗ ಸಮಾಜದ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಸಚಿವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘ ಮತ್ತು ಯುವ ಬಿಲ್ಲವ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡ ಜನಾರ್ಧನ ಪೂಜಾರಿ ಅವರು ನಾಡು, ನುಡಿ, ನೆಲ, ಜಲದ ಬಗ್ಗೆ ಹಾಗೂ ದೀನ ದಲಿತ, ಹಿಂದುಳಿದ ಸಮಾಜದ ಸರ್ವತೋಮುಖ ಬೆಳೆವಣಿಗೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂತಹ ನಾಯಕನ ವಿರುದ್ಧ  ಇತ್ತೀಚೆಗೆ ಸುರತ್ಕಲ್‍ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಾವಿರಾರು ಜನರ ಮುಂದೆ ಸಚಿವ ರಮಾನಾಥ್ ರೈ ಅವರು, ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ. ಇದನ್ನು ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ರಮಾನಾಥ್ ರೈ ಅವರ ಇಂತಹ ಮಾತುಗಳಿಂದ ಸಮಸ್ತ ಬಿಲ್ಲವ ಮತ್ತು ಈಡಿಗ ಸಮಾಜಕ್ಕೆ ತೀವ್ರ ರೀತಿಯಲ್ಲಿ ನೋವಾಗಿದೆ. ಅಲ್ಲದೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಾಗಿದೆ. ಹಾಗಾಗಿ ರಮಾನಾಥ್ ರೈ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಸರಕಾರ ಕೂಡಲೇ ಸಚಿವ ಸಂಪುಟದಿಂದ ಕೈಬಿಟ್ಟು ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಪಂ ಸದಸ್ಯೆ ಸುಧಾ, ಹೆಸಗಲ್ ಗ್ರಾಪಂ ಉಪಧ್ಯಕ್ಷ ಚಂದ್ರಶೇಖರ್‍ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಕಾರ್ಯದರ್ಶಿ ತಾರನಾಥ್, ಯೋಗೇಶ್ ಪೂಜಾರಿ, ವಸಂತಪೂಜಾರಿ, ಸುಂದರಪೂಜಾರಿ, ರವಿ ಪೂಜಾರಿ, ಸಾಗರ ಪೂಜಾರಿ, ವೆಂಕಟೇಶ್ ಪೂಜಾರಿ, ರಘುಪೂಜಾರಿ, ಹೇಮಂತ್‍ಪೂಜಾರಿ, ಸತೀಶ್‍ಮರ್ಕಲ್, ಗೋವಿಂದ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News