×
Ad

ಆಶ್ರಯ ಯೋಜನೆ ಅರ್ಜಿ ಸಲ್ಲಿಸಲು ವಿಸ್ತರಣೆಯಾಗದ ಕಾಲಾವಾಕಾಶ: ಸಾರ್ವಜನಿಕ ವಲಯದಲ್ಲಿ ಅಸಮಾಧಾನ

Update: 2018-01-09 22:20 IST

ಶಿವಮೊಗ್ಗ, ಜ. 9: ಮಹಾನಗರ ಪಾಲಿಕೆ ಆಡಳಿತವು ಆಶ್ರಯ ಯೋಜನೆಯಡಿ ಬಡ ವಸತಿ ರಹಿತರಿಗೆ ಮನೆ ವಿತರಿಸಲು ನಿರ್ಧರಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕಾಲಾವಾಕಾಶ ಕೂಡ ಪೂರ್ಣಗೊಂಡಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗದ ಕಾರಣದಿಂದ, ಅರ್ಜಿ ಸಲ್ಲಿಕೆ ಕಾಲಾವದಿ ವಿಸ್ತರಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. 

ಆದರೆ ಇತ್ತೀಚೆಗೆ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿ, ಮುಂಗಡ ಮೊತ್ತ ಪಾವತಿಸದ ಅರ್ಜಿದಾರರಿಗೆ ಹಣ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕೆಂಬ ಬೇಡಿಕೆಗೆ ಮನ್ನಣೆ ದೊರಕಿಲ್ಲ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಲಾರಂಭಿಸಿದೆ. 

ಅರ್ಜಿ ಆಹ್ವಾನ: ಆಶ್ರಯ ಯೋಜನೆಯಡಿ 2 ಪ್ಲಸ್ ಮಾದರಿಯ ಅಪಾರ್ಟ್‍ಮೆಂಟ್ ನಿರ್ಮಿಸಿ, 6140 ಮನೆ ವಿತರಣೆ ಮಾಡಲು ಪಾಲಿಕೆ ಆಡಳಿತ ನಿರ್ಧರಿಸಿದೆ. ಕಳೆದ ಡಿಸೆಂಬರ್ 5 ರಿಂದ 28 ರವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಡಿ. 30 ರವರೆಗೆ ನಿಗದಿತ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಿತ್ತು. 

ಅರ್ಜಿಯ ಜೊತೆಗೆ ಸಾಮಾನ್ಯ ವರ್ಗದವರು ಮುಂಗಡವಾಗಿ 8200 ರೂ. ಹಾಗೂ ಪರಿಶಿಷ್ಟ ಜಾತಿ - ಪಂಗಡದವರು 5100 ರೂ.ಗಳನ್ನು ಪಾಲಿಕೆಯ ಖಾತೆಗೆ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮನೆ ಹಂಚಿಕೆಯಾಗದ ಅರ್ಜಿದಾರರ ಬ್ಯಾಂಕ್ ಖಾತೆಗೆ ಈ ಮುಂಗಡ ಮೊತ್ತ ಮರು ಪಾವತಿಸುವುದಾಗಿ ಪಾಲಿಕೆ ಆಡಳಿತ ಸ್ಪಷ್ಟಪಡಿಸಿತ್ತು. 

ಮನೆ ಹಂಚಿಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ., ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ವ್ಯಯಿಸಲಿದ್ದು, ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ 1.50 ಲಕ್ಷ ರೂ. ಮಂಜೂರಾಗುತ್ತದೆ. ಫಲಾನುಭವಿಯು 80 ಸಾವಿರ ರೂ. ಪಾವತಿಸಬೇಕಾಗಿತ್ತು. ಉಳಿದಂತೆ ಪರಿಶಿಷ್ಟ ಜಾತಿ - ಪಂಗಡದ ಫಲಾನುಭವಿಗೆ ಕೇಂದ್ರದಿಂದ 1.50 ಲಕ್ಷ ರೂ., ರಾಜ್ಯ ಸರ್ಕಾರದಿಂದ 1.80 ಲಕ್ಷ ರೂ., 1.20 ಲಕ್ಷ ರೂ. ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ ಲಭ್ಯವಾಗುತ್ತದೆ. ಫಲಾನುಭವಿಯು 50 ಸಾವಿರ ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಿತ್ತು. 

ಸಲ್ಲಿಕೆಯಾಗಿಲ್ಲ: ಪಾಲಿಕೆ ಆಡಳಿತ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಗಡುವಿನಲ್ಲಿ ಸರಿಸುಮಾರು 8900 ನಾಗರೀಕರು ಅರ್ಜಿ ಸಲ್ಲಿಸಿದ್ದರು. ಆದರೆ ಸೂಕ್ತ ಮುಂಗಡ ಮೊತ್ತ, ಅದಿಕೃತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 4800 ಮಾತ್ರವಾಗಿತ್ತು. ಹಂಚಿಕೆಗೆ ಲಭ್ಯವಿರುವ ಮನೆಗಳ ಸಂಖ್ಯೆಯಷ್ಟು ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಉಳಿದಂತೆ ಸುಮಾರು 4100 ಅರ್ಜಿಗಳಿಗೆ ಸಂಬಂಧಿಸಿದಂತೆ ಮುಂಗಡ ಮೊತ್ತ ಪಾವತಿಯಾಗಿರಲಿಲ್ಲ. ಇಂತಹ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲು ಅವಕಾಶವಿರಲಿಲ್ಲ. 

ಹಂಚಿಕೆಗೆ ಲಭ್ಯವಿರುವ ಮನೆಗಳ ಸಂಖ್ಯೆಯಷ್ಟು ಅರ್ಜಿಗಳು ಸಲ್ಲಿಕೆಯಾಗದಿರುವ ಕಾರಣದಿಂದ, ಅರ್ಜಿ ಸಲ್ಲಿಸಲು ಕಾಲಾವಾಕಾಶ ವಿಸ್ತರಣೆ ಮಾಡಬೇಕು. ಈ ಮೂಲಕ ಬಡ ವಸತಿರಹಿತರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಇತ್ತೀಚೆಗೆ ಈ ಸಂಬಂಧ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‍ಗೆ ಮನವಿ ಕೂಡ ಅರ್ಪಿಸಿದ್ದರು. 

ಆದರೆ ಆಶ್ರಯ ಸಮಿತಿ ಸಭೆಯಲ್ಲಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ವಿಸ್ತರಣೆ ಮಾಡಲು ಅವಕಾಶ ಕಲ್ಪಿಸಿಲ್ಲ. ಇದಕ್ಕೆ ಬದಲಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ, ಮುಂಗಡ ಮೊತ್ತ ಪಾವತಿಸದ ಅರ್ಜಿದಾರರಿಗೆ ಹಣ ಪಾವತಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಈ ನಿರ್ಧಾರ ಸ್ವಾಗತಾರ್ಹವಾದರು, ಅರ್ಜಿ ಸಲ್ಲಿಸಲು ಕಾಲಾವಾಕಾಶ ವಿಸ್ತರಣೆ ಮಾಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. 

'ಅದೆಷ್ಟೊ ಬಡವರಿಗೆ ಮಾಹಿತಿಯೇ ಇಲ್ಲ':
ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಿ ಕೊಡುವ ಬಗ್ಗೆ ಹಾಗೂ ಸರ್ಕಾರಗಳಿಂದ ಸಹಾಯ ಧನ ಲಭ್ಯವಾಗುವ ಬಗ್ಗೆ ಅದೆಷ್ಟೊ ಬಡ ವಸತಿರಹಿತರಿಗೆ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಲಕ್ಷಾಂತರ ರೂ. ಹಣ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಕೆಲವರು ಅರ್ಜಿ ಹಾಕಲು ಮುಂದಾಗಿಲ್ಲ. ಇನ್ನೂ ಕೆಲ ಕಡುಬಡವರಿಗೆ ಅರ್ಜಿ ಆಹ್ವಾನಿಸಿರುವುದರ ವಿವರವೇ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತ ನಗರಾದ್ಯಂತ ವ್ಯಾಪಕ ಪ್ರಚಾರ ನಡೆಸಬೇಕು. ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸಬೇಕು. ಅರ್ಜಿ ಸಲ್ಲಿಸಲು ಕಾಲಾವಾಕಾಶ ವಿಸ್ತರಣೆ ಮಾಡಬೇಕು. ಈ ಮೂಲಕ ಬಡ ವಸತಿರಹಿತರಿಗೆ ಅವಕಾಶ ಕಲ್ಪಿಸಿಕೊಡಬೇಕು' ಎಂದು ಯುವ ಕಾಂಗ್ರೆಸ್ ನಗರಾಧ್ಯಕ್ಷ ಹೆಚ್.ಪಿ.ಗಿರೀಶ್‍ರವರು ಆಗ್ರಹಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News