ಮಡಿಕೇರಿ: ಎಂ.ಸಿ.ನಾಣಯ್ಯ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ಮಡಿಕೇರಿ, ಜ.9 : ರಾಜ್ಯ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಅವರ ಮಡಿಕೇರಿ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಚರ್ಚಿಸಿದರು.
ಇಂದು ಸಂಜೆ ನಗರದ ಸ್ಟುವರ್ಟ್ ಹಿಲ್ ಬಳಿಯಿರುವ ಎಂ.ಸಿ.ನಾಣಯ್ಯ ಅವರ ಮನೆಗೆ ಖುದ್ದು ಭೇಟಿ ನೀಡಿದ ಮುಖ್ಯಮಂತ್ರಿಗಳು 25 ನಿಮಿಷಗಳ ಕಾಲ ಮಾತನಾಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹಾಗೂ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ ಉಪಸ್ಥಿತರಿದ್ದರು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಮತ್ತು ನಾಣಯ್ಯನವರು ಬಹಳ ವರ್ಷಗಳ ಸ್ನೇಹಿತರು. ಅವರ ಆರೋಗ್ಯ ವಿಚಾರಿಸಲೆಂದು ಭೇಟಿ ಮಾಡಿದ್ದೇನೆ. ರಾಜಕೀಯ ಚರ್ಚೆಗಳು ಏನೂ ಆಗಿಲ್ಲ. ನಾಣಯ್ಯನವರು ತುಂಬಾ ಹಿರಿಯ ನಾಯಕರು. ಅವರನ್ನು ಜೆಡಿಎಸ್ ಬಳಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು, ಆದರೆ ಅವರು ಮಾಡಿಲ್ಲ. ನಾಣಯ್ಯ ನನ್ನ ಒಳ್ಳೆಯ ಗೆಳೆಯ. ಅವರನ್ನು ಪಕ್ಷಕ್ಕೆ ಆಹ್ವಾನ ಮಾಡುವ ವಿಚಾರ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಎಂ.ಸಿ.ನಾಣಯ್ಯ ಅವರು ಮಾತನಾಡಿ, ಮುಖ್ಯಮಂತ್ರಿಗಳು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾರೆ. ಅವರಿಗೆ ನನ್ನ ದೊಡ್ಡ ಅಭಿನಂದನೆಗಳು. ಸುಮಾರು 30 ರಿಂದ 40 ದಿನ ಆರೋಗ್ಯ ಸರಿಯಿಲ್ಲದ್ದರಿಂದ ನಾನು ಮಂಗಳೂರಿನ ಆಸ್ಪತ್ರೆಯಲ್ಲಿದ್ದೆ. ಅದು ಗೊತ್ತಾದ ಮೇಲೆ ಇಂದು ಸಿದ್ದರಾಮಯ್ಯ ಅವರು ಮಡಿಕೇರಿಗೆ ಬಂದಾಗ ಮನೆಗೆ ಬಂದರು, ಕಷ್ಟ ಸುಖ ವಿಚಾರಿಸಿದರು ಅಷ್ಟೆ. ಮುಂದಿನ ದಿನಗಳಲ್ಲಿ ರಾಜಕಾರಣ ಎಂಬುದು ನಿಂತ ನೀರಾಗಿರುವುದಿಲ್ಲವೆಂದರು. ನಾನು ಸಿದ್ದರಾಮಯ್ಯ ಅವರಿಗೆ ಶುಭ ಕೋರುತ್ತೇನೆ ಅಷ್ಟೆ ಎಂದು ನಾಣಯ್ಯ ತಿಳಿಸಿದರು.