ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಿ: ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಆಗ್ರಹ
ಮೈಸೂರು,ಜ.9: ಅಸ್ಪೃಶ್ಯತೆಗೆ ಒಳಗಾಗಿರುವ ದಲಿತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನ್ಯಾ.ಎ.ಜೆ.ಸಾದಶಿವ ಆಯೋಗದ ವರದಿ ಪ್ರಾಮುಖ್ಯತೆ ಪಡೆದಿದ್ದು, ಕೂಡಲೇ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.
ನಗರದ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮಂಗಳವಾರ ನ್ಯಾ.ಎ.ಜೆ.ಸದಾಶಿವ ಆಯೋಗ ಹೋರಾಟ ಕುರಿತ ವಿಚಾರ ಸಂಕಿರಣವನ್ನು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರ ಸಮರ್ಪಿಸುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹಳ ತಳಮಟ್ಟದಿಂದ ಇಂದು ಮುಖ್ಯಮಂತ್ರಿ ಯಂತಹ ಹುದ್ದೆಯನ್ನು ಅಲಂಕರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಂದರೆ ಸಿದ್ಧರಾಮಯ್ಯ, ಇಂದು ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೇವಲ ನೆಪಮಾತ್ರ. ನಾನು ದಲಿತ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಲಿತರ ಮೇಲೆ ಕಾಳಜಿ ಇದ್ದರೆ ಕೂಡಲೇ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಮಾಡಲಿ ಎಂದು ಹೇಳಿದರು.
ಭಾರತೀಯರೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಗಳನ್ನು ದೊರಕಿಸಿಕೊಡುವಂತೆ ಭಾರತದ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ದೇಶದಲ್ಲಿ ಇಂದು 130 ಕೋಟಿ ಜನಸಂಖ್ಯೆ ಇದೆ. ಅವರೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ. ಈ ಮೂರು ಅಂಶಗಳನ್ನು ನೀಡಿದ್ದೇ ಆದರೆ ಪರಸ್ಪರ ಜನರಲ್ಲಿ ಸಹೋದರತ್ವ ಬೆಳೆಯಲಿದೆ ಎಂದರು.
ರಾಷ್ಟ್ರದ ಜನಸಂಖ್ಯೆ ಎಷ್ಟೇ ಇರಲಿ ಅದರಲ್ಲಿ ತಮ್ಮ ಪಾಲಿನ ಸವಲತ್ತುಗಳನ್ನು ಪಡೆದುಕೊಳ್ಳುವುದು ಅವರ ಹಕ್ಕು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಲ್ಲಿ ಒಳ ಮೀಸಲಾತಿ ತರುವ ದಿಸೆಯಲ್ಲಿ ನ್ಯಾ. ಸದಾಶಿವ ಆಯೋಗವು ರಚಿಸಿರುವ ವರದಿಯು ಬಹಳ ಪ್ರಾಮುಖ್ಯತೆ ಪಡೆದಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವರದಿಯನ್ನು ತಿರುಚಿರುವುದು ಭಾರತದ ಮೂಲ ನಿವಾಸಿಗಳಿಗೆ ಅನ್ಯಾಯವೆಸಗಿದಂತಾಗಿದೆ. ಇವರುಗಳು ತಮ್ಮ ಸವಲತ್ತುಗಳಿಗಾಗಿ ಕೈಚಾಚುತ್ತಿರುವುದು ಶೋಚನೀಯ ಸಂಗತಿ. ಎಡಗೈ ಹಾಗೂ ಬಲಗೈ ಪಂಥದವರಿಗೆ ಇದು ಮಾರಕವಾಗಿ ಪರಿಣಮಿಸಿದೆ. ಆದ ಕಾರಣ ಈ ಎರಡು ಪಂಥದವರು ಸಂಘಟಿತರಾಗಿ ಸದಾಶಿವ ಆಯೋಗದ ವರದಿಯನ್ನು ಆದಷ್ಟು ಬೇಗನೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜ್, ಅಖಿಲ ಕರ್ನಾಟಕ ಛಲವಾದಿ ಮಹಾಸಭಾಧ್ಯಕ್ಷ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೋ.ನಟರಾಜ್ ಮತ್ತಿತರರು ಪಾಲ್ಗೊಂಡಿದ್ದರು.