×
Ad

ಶ್ರೀನಿವಾಸಪುರ: ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

Update: 2018-01-09 23:41 IST

ಕೋಲಾರ,ಜ.9: ಶ್ರೀನಿವಾಸಪುರ ತಾಲ್ಲೂಕು ಮಾರಿಮಾಕಲಪಲ್ಲಿಯ ಜೆಡಿಎಸ್ ಯುವ ಮುಖಂಡ, ಹರೀಶ್ ರೆಡ್ಡಿ, ಕಿರಣ್ ರೆಡ್ಡಿ, ಅನೀಲ್ ರೆಡ್ಡಿ, ಶಂಕರ್ ಮತ್ತಿತರರು ಸಚಿವ ರಮೇಶ್‍ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದರು. 

ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಚಿವ ರಮೇಶ್‍ಕುಮಾರ್, ಕ್ಷೇತ್ರದಲ್ಲಿ ಯಾವುದೇ ಪಕ್ಷ,ಜಾತಿಬೇಧ ಮಾಡದೇ ಜನರ ಕೆಲಸ ಮಾಡಿದ್ದೇನೆ, ಇಡೀ ಕ್ಷೇತ್ರವನ್ನು ಗುಡಿಸಲು ರಹಿತವಾಗಿಸಲು 18 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ.

ಈ ಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಯಾವುದೇ ಜಾತಿ,ಹಣಬಲವಿಲ್ಲದ ನನ್ನನ್ನು ಮನೆಯ ಮಗನಂತೆ ಇಲ್ಲಿನ ಜನ ಆಶೀರ್ವದಿಸಿದ್ದಾರೆ. ಅವರ ಋಣ ತೀರಿಸಲು ಅಸಾಧ್ಯ. ರಾಜಕಾರಣ ಚುನಾವಣೆಗೆ ಸೀಮಿತವಾಗಿರಬೇಕು, ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ, ನನ್ನ ಶಕ್ತಿ ಮೀರಿ ಶ್ರಮಿಸಿದ್ದೇನೆ, ಗ್ರಾಮಗಳಲ್ಲಿ ಶುದ್ದ ನೀರಿನ ಘಟಕ ಒದಗಿಸುವ ಸಾಲಿನಲ್ಲೂ ಇಡೀ ರಾಜ್ಯದಲ್ಲೇ ಶ್ರೀನಿವಾಸಪುರ ಮೊದಲನೆಯದಾಗಿದೆ ಎಂದು ಹೇಳಿದರು.

ಇಡೀ ಶ್ರೀನಿವಾಸಪುರ ಕ್ಷೇತ್ರವನ್ನು ಮಾದರಿಯಾಗಿಸುವುದೇ ನನ್ನ ಉದ್ದೇಶವಾಗಿದೆ, ನನಗೆ ಹಣ ನೀಡಿ ಓಟು ಕೇಳುವ ಶಕ್ತಿಯೂ ಇಲ್ಲ, ಅಂತಹ ರಾಜಕಾರಣ ನನಗೆ ಅಗತ್ಯವೂ ಇಲ್ಲ. ನಾನು ಇಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳ ಹಿಂದೆ ರಾಜಕೀಯ ಖಂಡಿತಾ ಇಲ್ಲ, ನನಗೆ ಓಟು ಹಾಕಿ ಎಂದೂ ನಾನು ಕೇಳಲ್ಲ, ನಾನು ಸರಿಯಾಗಿ ನಡೆದುಕೊಂಡಿದ್ದರೆ ಮಾತ್ರ ನನಗೆ ಆಶೀರ್ವಾದ ನೀಡಿ ಎಂದರು.

ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಮುಖಂಡರು ಮಾತನಾಡಿ, ಶ್ರೀನಿವಾಸಪುರ ಇತಿಹಾಸದಲ್ಲೇ ಇಂತಹ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ, ಇಡೀ ರಾಜ್ಯಕ್ಕೆ ಪ್ರಾಯೋಗಿಕವಾಗಿ ಇಲ್ಲಿ 18 ಸಾವಿರ ಮನೆಗಳು ನಿರ್ಮಾಣವಾಗುತ್ತಿವೆ ಇಂತಹ ಕೆಲಸಗಳನ್ನು ನೋಡಿ ನಾವು ಕಾಂಗ್ರೆಸ್‍ಗೆ ಸೇರುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಕೆ.ಮಂಜು, ಮರಿಮಾಕಲಪಲ್ಲಿ  ವೇಣು ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News