'ಕೇಂದ್ರದ ಚಾರ್‌ಧಾಮ್ ಅಭಿವೃದ್ಧಿ ಯೋಜನೆ ವಿನಾಶಕಾರಿ'

Update: 2018-01-10 04:15 GMT

ಡೆಹ್ರಾಡೂನ್, ಜ. 10: ಚಾರ್‌ಧಾಮ್ ಯಾತ್ರಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಎರಡು ಅಭಿವೃದ್ಧಿ ಯೋಜನೆಗಳು ಭೂಕಂಪ ಅಪಾಯದ ಈ ಪ್ರದೇಶಕ್ಕೆ ವಿನಾಶಕಾರಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಚಾರ್‌ಧಾಮಕ್ಕೆ ಸರ್ವಋತು ರಸ್ತೆ ನಿರ್ಮಿಸುವ ಯೋಜನೆ ಮತ್ತು ಹೃಷಿಕೇಶದಿಂದ ಕರ್ಣಪ್ರಯಾಗಕ್ಕೆ ರೈಲು ಹಳಿ ಜೋಡಿಸುವ ಯೋಜನೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳದಿದ್ದರೆ, ಭೂಕಂಪ ಸಂವೇದಿ ಹಿಮಾಲಯ ಪ್ರದೇಶಕ್ಕೆ ಇದು ವಿನಾಶಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಮೂಲೆಮೂಲೆಗಳಿಂದ ಆಗಮಿಸುವ ಚಾರ್‌ಧಾಮ್ ಯಾತ್ರಿಕರ ಅನುಕೂಲಕ್ಕಾಗಿ ಕೇಂದ್ರದ ನೆರವಿನಲ್ಲಿ ಈ ಎರಡು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

"ನಾನು ಅಭಿವೃದ್ಧಿ ವಿರೋಧಿಯಲ್ಲ. ಆದರೆ ಎರಡು ಮೆಗಾ ಯೋಜನೆಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೈಟೆಕ್ ಎಂಜಿನಿಯರಿಂಗ್ ಬಳಸಿಕೊಂಡು ಅನುಷ್ಠಾನಕ್ಕೆ ತರಬೇಕು" ಎಂದು ಗರ್ವಾಲ್ ಕೇಂದ್ರೀಯ ವಿವಿ ಭೂಗೋಳ ತಜ್ಞರಾದ ಪ್ರೊ.ವೈ.ಪಿ.ಸುಂದರಿಯಾಳ್ ಅಭಿಪ್ರಾಯಪಟ್ಟಿದ್ದಾರೆ. ಬೆಟ್ಟಗಳ ಅನಿಯಂತ್ರಿತ ಸಿಡಿಸುವಿಕೆ ಮತ್ತು ಸುರಂಗ ಕೊರೆಯುವ ಹಳೆ ತಂತ್ರಜ್ಞಾನವನ್ನೇ ಮುಂದುವರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದ್ದಾರೆ.

ಗಂಗಾ, ಅಲಕಾನಂದ, ಭಾಗೀರಥಿ, ಯಮುನಾ ಹಾಗೂ ಮಂದಾಕಿನಿ ಹೀಗೆ ಐದು ಕಾಲುವೆಗಳ ಜಾಲದಲ್ಲಿ ಈಗಾಗಲೇ ರಸ್ತೆ ಹಾಗೂ ಹೆದ್ದಾರಿ ಜಾಲವಿದ್ದು, ಇದು ಭೂಕಂಪ ಸೂಕ್ಷ್ಮ ಪ್ರದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ. 1991ರಿಂದ ಈ ಭಾಗದಲ್ಲಿ ಸಂಭವಿಸಿದ ಬಹುತೇಕ ಎಲ್ಲ ಭೂಕಂಪಗಳು ಈ ವಲಯದಲ್ಲಿ ಆಗಿವೆ ಎಂದು ಅವರು ಹೇಳಿದ್ದಾರೆ. ದೊಡ್ಡ ಪ್ರಮಾಣದ ಭೂಕಂಪದಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಕುಸಿಯುವುದು ಖಚಿತ ಎನ್ನುವುದು ಅವರ ಅಭಿಪ್ರಾಯ.

ಅನಿಯಂತ್ರಿತ ಕಲ್ಲು ಸಿಡಿಸುವಿಕೆಯಿಂದ ಬೆಟ್ಟದ ಸಡಿಲವಾದ ಪ್ರದೇಶ ಕುಸಿದು ಬೀಳುವ ಅಪಾಯವಿದ್ದು, ಮಳೆಗಾಲದಲ್ಲಿ ಇದು ವಿನಾಶಕಾರಿಯಾಗಲಿದೆ. 2013ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವಿರಾರು ಮಂದಿ ಬಲಿಯಾದದ್ದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News