×
Ad

ಅಮಿತ್‍ ಶಾ ಜೈಲಿಗೆ ಹೋಗಿದ್ದ, 2 ವರ್ಷ ಗಡೀಪಾರಾಗಿದ್ದ ವ್ಯಕ್ತಿ: ಸಿಎಂ ಸಿದ್ದರಾಮಯ್ಯ

Update: 2018-01-10 19:01 IST

ಕೊಳ್ಳೇಗಾಲ,ಜ.10: ಭಾರತೀಯ ಜನತಾ ಪಾರ್ಟಿಯು ಕೋಮು ಗಲಭೆಗೆ ಉತ್ತೇಜಿಸುವ ಪಕ್ಷ, ಸಂವಿಧಾನವನ್ನೇ ಬದಲಾಯಿಸಬೇಕು ಎನ್ನುವ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಪಟ್ಟಣದ ಎಂಜಿಎಸ್‍ವಿ ಮೈದಾನದಲ್ಲಿ ಬುಧವಾರ ನಡೆದ ಸಾಧನಾ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಕಾರ್ಯ ಮಾಡಿದೆ ಎಂದ ಅವರು, ಹಸಿವು ಮುಕ್ತ, ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಲು ಮನವಿ ಮಾಡಿದರು.

ಅಮಿತ್‍ ಶಾ ಜೈಲಿಗೆ ಹೋಗಿಬಂದವರು, 2 ವರ್ಷ ಗಡೀಪಾರು ಆಗಿದ್ದ ವ್ಯಕ್ತಿ !

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾ ಜೈಲಿಗೆ ಹೋಗಿದ್ದವರು. 2 ವರ್ಷ ಗಡಿಪಾರು ಆಗಿದ್ದ ವ್ಯಕ್ತಿ. ಈತ ಈಗ ಕರ್ನಾಟಕಕ್ಕೆ ಬಂದು ಕಾಂಗ್ರೆಸ್ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ಬೊಗಳೆ ಬಿಡುತ್ತಿದ್ದಾರೆ. ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯನಾಯ್ಡು, ಜನಾರ್ಧನ ರೆಡ್ಡಿ ಜೈಲಿಗೆ ಹೋಗಿ ಬಂದವರು. ಇವರಿಗೆ ನನ್ನ ಬಗ್ಗೆ ಹಾಗೂ ನಮ್ಮ ಪಕ್ಷದ ಆಡಳಿತದ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ಸಿಎಂ ಹೇಳಿದರು.

ಬಂಡವಾಳ ಹೂಡಿಕೆಯಲ್ಲಿ ನಂ.1 ಸರ್ಕಾರ: 

2014 ರಲ್ಲಿ ಬಂಡವಾಳ ಹೂಡಿಕೆಯಲ್ಲಿ 11 ಸ್ಥಾನದಲ್ಲಿದ್ದ ನಮ್ಮ ರಾಜ್ಯ ಈಗ ನಂಬರ್ 1 ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಂಧ್ರ ಪ್ರದೇಶ ಬಿಟ್ಟರೆ ರೈತರ ಸಾಲ ಮನ್ನಾ ಮಾಡಿದ ಸರ್ಕಾರ ನಮ್ಮದು ಮಾತ್ರ. ರಾಷ್ಟ್ರೀಯ ಬ್ಯಾಂಕ್ ಸಾಲ ಮನ್ನಾ ಮಾಡುವಂತೆ ಪ್ರಧಾನ ಮಂತ್ರಿಯ ಬಳಿ ಹೋದಾಗ ಅವರು ಕ್ಯಾರೇ ಎನ್ನಲಿಲ್ಲ ಎಂದು ಕೇಂದ್ರ ಸರ್ಕಾರದ ಆಡಳಿತವನ್ನು ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿ ಮಿಷನ್ 150ರಿಂದ 50ಕ್ಕೆ ಇಳಿದಿದೆ: ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನಗಳಿಸಿ, ಆಡಳಿತದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈಗ 50 ಸ್ಥಾನ ಗಳಿಸಿ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರ ಬಗ್ಗೆಯೇ ವಿಶ್ವಾಸವಿಲ್ಲದ ಪರಿಸ್ಥಿತಿ ಉಂಟಾಗಿದೆ. ಕೊಳ್ಳೇಗಾಲ ಶಾಸಕ ಜಯಣ್ಣ ಅವರದ್ದು ಮಾತು ಕಡಿಮೆ ಆದರೆ ಕಾರ್ಯದಲ್ಲಿ ಮುಂದು. ಇವರು ಈ ಕ್ಷೇತ್ರದಲ್ಲಿ 196 ಕೋಟಿ ರೂ ಗಳ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಮಂಜೂರಾತಿ ಪಡೆದು ಕೆಲಸಗಳು ಪ್ರಗತಿ ಸಾಧಿಸಿದೆ. ಶಾಸಕ ಜಯಣ್ಣ ಸರಳ ಹಾಗೂ ಸಜ್ಜನ ವ್ಯಕ್ತಿ. ಆಗಾಗ ಆರೋಗ್ಯ ಕೈಕೊಡುತ್ತಿದ್ದರೂ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡ್ಯೊಯಲು ಶ್ರಮಿಸುತ್ತಿದ್ದಾರೆ ಎಂದರು.

ಶಾಸಕ ಜಯಣ್ಣ ಮಾತನಾಡಿ, ಕೊಳ್ಳೇಗಾಲದಲ್ಲಿ ನೂತನ ಬಸ್‍ನಿಲ್ದಾಣ ಸರ್‍ಕಾಟನ್ ಚಾನಲ್ ಹಾಗೂ ನಗರಸಭೆ ನೂತನ ಕಚೇರಿ ಸೇರಿದಂತೆ 200 ಕೋಟಿ ರೂ.ಗಳ ಅನುದಾನ ಸರ್ಕಾರ ನೀಡಿದೆ. ಹಿಂದೆಂದೂ ಇಷ್ಟೊಂದು ದೊಡ್ಡ ಮೊತ್ತ ಈ ಕ್ಷೇತ್ರಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿಸಿದರು.

ಸಂಸದ ಧ್ರುವನಾರಾಯಣ ಮಾತನಾಡಿ, 4 ವರ್ಷದಲ್ಲಿ ಸರ್ಕಾರ ಸಾಧಿಸಿರುವ ಸಾಧನೆಗಳ ಬಗ್ಗೆ ವಿವರ ನೀಡಿದರಲ್ಲದೆ ಜಯಣ್ಣನವರ ಶ್ರಮದಿಂದ ಕೊಳ್ಳೇಗಾಲ ಕ್ಷೇತ್ರ ಅಭಿವೃದ್ಧಿಯತ್ತ ಮುನ್ನುಗುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ರ, ಕೊಳ್ಳೇಗಾಲ ನಗರ ಸಭಾ ಅಧ್ಯಕ್ಷ ಶಾಂತರಾಜು, ಮಾಜಿ ಶಾಸಕ ಬಾಲರಾಜು, ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಕಿನಕಹಳ್ಳಿ ರಾಚಯ್ಯ, ಜಿ.ಪಂ. ಉಪಾಧ್ಯಕ್ಷ ಯೋಗೇಶ್, ಯಳಂದೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಲಿಂಗರಾಜು, ಜಿಲ್ಲಾಧಿಕಾರಿ ಬಿ.ರಾಮು, ಉಪವಿಭಾಗಾಧಿಕಾರಿ ಫೌಜಿಯ ತರನ್ನಮ್, ಪೌರಾಯುಕ್ತ ಡಿ.ಕೆ. ಲಿಂಗರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News