ಧನ್ಯಶ್ರೀ ಆತ್ಮಹತ್ಯೆ ಪ್ರಕರಣ: ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಣ್ಣಾಮಲೈ ಹೇಳಿದ್ದೇನು ?

Update: 2018-01-10 14:58 GMT

ಚಿಕ್ಕಮಗಳೂರು, ಜ.10: ಮೂಡಿಗೆರೆಯಲ್ಲಿ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ನಂತರ ಆಕೆಯ ತಂದೆ ಯಾದವ್ ಸುವರ್ಣರ ಹಾದಿ ತಪ್ಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಕೆಲವರ ವಿರುದ್ಧ ಇಂದು ರಾತ್ರಿಯೊಳಗೆ ಎರಡನೇ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದರು.

ಅವರು ಬುಧವಾರ ಸಂಜೆ ಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆರೋಪಿ ಸಂತೋಷ್ ಸೇರಿದಂತೆ ನಾಲ್ಕೈದು ಜನ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಧನ್ಯಶ್ರೀ ಆತ್ಮಹತ್ಯೆ ಮಾಡುವ ಮುನ್ನ ಎರಡು ದಿನ ಊಟ ಮಾಡಿರಲಿಲ್ಲ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪೊಲೀಸರ ದಾರಿ ತಪ್ಪಿಸಿ ಸುಳ್ಳು ಪ್ರಕರಣ ನೀಡಲು ಅವಕಾಶ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ನಿರ್ಧಾಕ್ಷಿಣ್ಯವಾಗಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮಾಧ್ಯಮದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಂಘಟನೆ ಕಾರ್ಯಕರ್ತರ ವಿರುದ್ಧ ಮೂರನೇ ಎಫ್‍ಐಆರ್ ದಾಖಲು ಮಾಡುತ್ತೇವೆ ಎಂದು ಹೇಳಿದರು.

ವಾಟ್ಸಾಪ್‍ನಲ್ಲಿ ವಾರ್ನಿಂಗ್‍ ಮೆಸೇಜ್ ಹಾಕಿದ ನಾಲ್ಕು ಜನರ ಮೇಲೂ ಎಫ್‍ಐಆರ್ ದಾಖಲು ಮಾಡುತ್ತೇವೆ. ಪ್ರಕರಣದಲ್ಲಿ ಒಟ್ಟು ನಾಲ್ಕು ಎಫ್‍ಐಆರ್ ದಾಖಲಿಸುತ್ತೇವೆ ಎಂದರು.

ವಾಟ್ಸಾಪ್‍ನಲ್ಲಿ ಧನ್ಯಶ್ರೀ ಜೊತೆ ಚಾಟ್ ಮಾಡಿರುವುದು ಸಂತೋಷ ಅಲ್ಲ. ಅದು ಬೇರೆ ಹೆಸರಿನಲ್ಲಿ ಚಾಟ್ ಮಾಡಲಾಗಿದೆ. ಅವನು ಯಾರು ಅನ್ನೋದು ಕೂಡ ಈಗಾಗಲೇ ಗೊತ್ತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು ಹಿಂದೂ, ಮುಸ್ಲಿಂ ಸಂಘಟನೆ ಎಂದು ನೋಡುವುದಿಲ್ಲ. ನಮಗೆ ಎಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಧನ್ಯಶ್ರೀ ತಾಯಿಯ ಜತೆಗೆ ಮಾತುಕತೆ ನಡೆಸಿದ ನಯನಗೆ ಕೂಡ ನೋಟೀಸ್ ನೀಡಲಾಗುವುದು. ಯಾರೊಂದಿಗಾದರೂ ಮಾತಾನಾಡುವಾಗ ಅವರಿಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡುವುದು ಅಪರಾಧವಾಗಿದೆ. ಈ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News