ನಿಜವಾದ ಉಗ್ರಗಾಮಿಗಳು ಬಿಜೆಪಿ ಮತ್ತು ಬಜರಂಗದಳದವರು: ಸಿದ್ದರಾಮಯ್ಯ

Update: 2018-01-10 16:53 GMT

ಚಾಮರಾಜನಗರ,ಜ.10: ನಿಜವಾದ ಉಗ್ರಗಾಮಿಗಳು ಬಿಜೆಪಿಯವರು ಮತ್ತು ಬಜರಂಗದಳದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಬಿಜೆಪಿಯವರು ಮತ್ತು ಬಜರಂಗದಳದವರು ವ್ಯವಸ್ಥಿತವಾದ ಸಿದ್ದತೆಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಪಿಎಫ್‍ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರವು ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಜೊತೆ ಶಾಮೀಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಅವರಲ್ಲಿ ಈ ಬಗ್ಗೆ ದಾಖಲೆಗಳಿದ್ದರೆ ನೀಡಲಿ. ನಂತರ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮಕ್ಕೆ ಮಡಿಕೇರಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮುಖ್ಯಮಂತಿ ಸಿದ್ದರಾಮಯ್ಯರವರನ್ನು ಜಿಲ್ಲಾಡಳಿತದಿಂದ ಗೌರವ ರಕ್ಷೆ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.

ನಾಗವಳ್ಳಿ ಗ್ರಾಮದಲ್ಲಿ ಹೆಲಿಪ್ಯಾಡ್‍ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕೋಮುಗಲಭೆ  ಸೃಷ್ಟಿಸುತ್ತಿರುವ ಬಿಜೆಪಿ ಮತ್ತು ಬಜರಂಗದಳದವರು ನಿಜವಾದ ಉಗ್ರಗಾಮಿಗಳು ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವ ಯಡಿಯೂರಪ್ಪ ಜೈಲಿಗೇ ಹೋಗಿ ಬಂದವರು. ಅವರಿಂದ ಪಾಠ ಕಲಿಯುವ ಪರಿಸ್ಥಿತಿ ಬಂದಿಲ್ಲ ಎಂದ ಅವರು, ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಮತ್ತು ಭಜರಂಗದದಳವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿ, ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಯವರು ರೈತರ ಪರವಾದ ಕೆಲಸ ಮಾಡಿಲ್ಲ. ಈಗ ರೈತರ ಪರ ಎಂದು ಹೇಳುತ್ತಿದ್ದಾರೆ. ಇದು ನಾಟಕವಲ್ಲದೆ ಮತ್ತೇನು ಎಂದು ಹೇಳಿದರು.

ಉತ್ತರ ಪ್ರದೇಶದ ಮುಖಮಂತ್ರಿ ಆದಿತ್ಯನಾಥರನ್ನು ರಾಜಕಾರಣ ಮಾಡುವ ಸಲುವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಹಿಂದುತ್ವ ಎಂದರೆ ಏನು, ನಾವೇನು ಹಿಂದೂಗಳಲ್ಲವೇ, ಹೇಸರಿನಲ್ಲೇ ಹಿಂದುತ್ವ ಇದೆ, ರಾಜಕಾರಣದಲ್ಲಿ ಧರ್ಮ ವಿರಬೇಕೆ ವಿನಃ ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿ, ಹಿಂದುತ್ವ ಹೆಸರಿನಲ್ಲಿ ಧರ್ಮ ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಎಂ.ಸಿ. ಮೋಹನಕುಮಾರಿ , ಸಂಸದ ಆರ್. ದೃವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News