×
Ad

ಮೈಸೂರು: ಡಾ.ಸ್ವಾಮಿನಾಥನ್ ವರದಿ ಕುರಿತು ಕೃಷಿ ತಜ್ಞರ ಜೊತೆ ಸಂವಾದ

Update: 2018-01-10 23:08 IST

ಮೈಸೂರು,ಜ.10: ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಡಾ.ಸ್ವಾಮಿನಾಥನ್ ವರದಿ ಪರಿಹಾರವೇ? ಎಂಬ ವಿಚಾರ ಕುರಿತಂತೆ ಕೃಷಿ ಸಮಸ್ಯೆಗಳ ಕುರಿತು ರೈತರು-ಕೃಷಿ ತಜ್ಞರ ಸಂವಾದ ಬುಧವಾರ ನಗರದ ರೇಸ್ ಕೋರ್ಸ್ ಹಿಂಭಾಗವಿರುವ ಚೇತನ್ ಗಾರ್ಡನ್ (ಅಂಗಳ) ದಲ್ಲಿ ನಡೆಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘ, ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ ಸಂವಾದದ ಅಧ್ಯಕ್ಷತೆಯನ್ನು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಪ್ರಮುಖವಾಗಿ ಕಂಡುಬರುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಅದರಂತೆ ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೆ ಇರುವುದು ಹಾಗೂ ಕೆಲವು ವೇಳೆ ಬೆಲೆ ಕುಸಿತದಿಂದ ಸಂಕಷ್ಟ ಅನುಭವಿಸುವುದು. ರೈತರ ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕು, ಸಹಕಾರ ಸಂಘಗಳಲ್ಲಿ ಸಾಲ ಸಿಗದೇ ಇರುವುದು. ಸಿಕ್ಕರೂ ಸಕಾಲಕ್ಕೆ ಅವಶ್ಯವಿರುವಷ್ಟೂ ಸಿಗದೆ ಇರುವ ಕಾರಣ ಸಂಕಷ್ಟಕ್ಕೆ ಸಿಲುಕುವುದು. ಹವಾಮಾನ ವೈಪರೀತ್ಯಗಳಿಂದ ಹಾಗೂ ಅತಿವೃಷ್ಟಿ, ಅನಾವೃಷ್ಟಿ ಪ್ರಭಾವದಿಂದ ಬೆಳೆ ನಷ್ಟ ಅನುಭವಿಸಿದಾಗ ರೈತರಿಗೆ ನ್ಯಾಯಯುತ ಪರಿಹಾರ ಸಿಗದೇ ಇರುವುದು-ಬೆಳೆ ವಿಮೆ ನೀತಿಯು ಇದಕ್ಕೆ ಅನುಗುಣವಾಗಿ ಇಲ್ಲದಿರುವುದು. ಹೀಗೆ ಕುರುಬೂರ್ ಶಾಂತಕುಮಾರ್ ವರದಿ ಮಾಡಿರುವ 21 ಸಮಸ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಚರ್ಚಿಸಲಾಯಿತು.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಹಾಗೂ ಜೆಎಸ್‍ಎಸ್ ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪದ್ಮಭೂಷಣ ಡಾ.ಮಹದೇವಪ್ಪ, ನವದೆಹಲಿ ಎನ್.ಎ.ಐ.ಪಿ, ಐ.ಸಿ.ಎ.ಆರ್ ನಿವೃತ್ತ ನ್ಯಾಷಿನಲ್ ಡೆರಕ್ಟರ್ ಡಾ.ಮೃತ್ಯುಂಜಯ, ಬೆಂಗಳೂರು ಕೃಷಿ ವಿವಿಯ ಮಾಜಿ ಕುಲಪತಿ ಡಾ.ನಾರಾಯಣಗೌಡ, ಬೆಂಗಳೂರು ಹಟಾರಿ ನಿರ್ದೇಶಕ ಡಾ.ಚಂದ್ರೇಗೌಡ, ಶಿವಮೊಗ್ಗ ಕೃಷಿ ವಿವಿ ನಿವೃತ್ತ ನಿರ್ದೇಶಕ (ಶಿಕ್ಷಣ) ಡಾ.ಎ.ಎಸ್.ಕುಮಾರಸ್ವಾಮಿ, ಪ್ರಸಾರಂಗ ನಿರ್ದೇಶಕ ಡಾ.ಶಶಿಧರ್, ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅರುಣ್ ಬಾಳಮಟ್ಟಿ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಮೌನೇಶ್ವರಿ ಕಂಮ್ಮಾರ (ಗೃಹ ವಿಜ್ಞಾನ), ಅಂಕಣ ಬರಹಗಾರ ಚಿನ್ನಸ್ವಾಮಿ ವಡ್ಡಗೆರೆ, ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್, ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನಿರ್ದೇಶಕ ಟಿ.ವಿ.ಗೋಪಿನಾಥ್, ಪ್ರಗತಿಪರ ಕೃಷಿಕರಾದ ಲಕ್ಷ್ಮೀ ದೇವಮ್ಮ, ಎ.ಪಿ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News