×
Ad

ಚಿನ್ನಾಭರಣ ಅಂಗಡಿ ಉದ್ಘಾಟನೆಗೆ ವಾಹನ ಸಂಚಾರ ನಿರ್ಬಂಧ: ನಾಗರೀಕರ ಆಕ್ರೋಶ

Update: 2018-01-10 23:31 IST

ಶಿವಮೊಗ್ಗ, ಜ.10: ಚಿನ್ನಾಭರಣ ಮಳಿಗೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ನಗರದ ಬಿ.ಹೆಚ್.ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರದ ಮೇಲೆ ಪೊಲೀಸರು ನಿರ್ಬಂಧ ಹೇರಿದ ಘಟನೆ ನಡೆಯಿತು. ಪೊಲೀಸ್ ಇಲಾಖೆಯ ಕ್ರಮಕ್ಕೆ ವಾಹನ ಸವಾರರು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಬೆಳಿಗ್ಗೆ ಸುಮಾರು 9.45 ರಿಂದ 11.30 ರವರೆಗೆ ಬಿ.ಹೆಚ್.ರಸ್ತೆಯ ಬಸ್ ನಿಲ್ದಾಣ ಸಮೀಪದಿಂದ ಎಎ ವೃತ್ತದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಸವಾರರು ಬದಲಿ ಮಾರ್ಗಗಳಲ್ಲಿ ಸಂಚರಿಸುವಂತಾಯಿತು. ಕೆಲ ವಾಹನ ಸವಾರರು ಸಂಚಾರಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ದೃಶ್ಯ ಕೂಡ ಕಂಡುಬಂದಿತು.  ವಾಹನ ಸಂಚಾರ ನಿರ್ಬಂಧದಿಂದ ರಸ್ತೆ ವ್ಯಾಪ್ತಿಯಲ್ಲಿದ್ದ ಅಂಗಡಿ, ಕಚೇರಿಗಳಿಗೆ ಆಗಮಿಸುವವರು ತೀವ್ರ ತೊಂದರೆ ಎದುರಿಸುವಂತಾಯಿತು. 

'ಚಿನ್ನಾಭರಣ ಅಂಗಡಿಯ ಉದ್ಘಾಟನೆಗೆ ಚಿತ್ರನಟರೊಬ್ಬರನ್ನು ಆಹ್ವಾನಿಸಲಾಗಿದೆ. ಇದರಿಂದ ನೂರಾರು ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದಾರೆ. ಈ ಕಾರಣದಿಂದ ಬಿ.ಹೆಚ್.ರಸ್ತೆಯ ನಿರ್ದಿಷ್ಟ ವ್ಯಾಪ್ತಿಯವರೆಗೆ ವಾಹನ ಸಂಚಾರದ ಮೇಲೆ ನಿರ್ಬಂಧ ಹಾಕಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಈ ಕ್ರಮಕೈಗೊಳ್ಳಲಾಗಿದೆ' ಎಂದು ಸಂಚಾರಿ ಪೊಲೀಸರೊಬ್ಬರು ತಿಳಿಸಿದರು. 

'ವಾಣಿಜ್ಯ ಉದ್ದೇಶದ ಕಾರ್ಯಕ್ರಮಕ್ಕಾಗಿ, ಯಾವುದೇ ಮುನ್ಸೂಚನೆ ನೀಡದೆ ರಸ್ತೆಯಲ್ಲಿ ದಿಢೀರ್ ಆಗಿ ಸಂಚಾರ ನಿರ್ಬಂಧಿಸುವುದು ಎಷ್ಟರಮಟ್ಟಿಗೆ ಸರಿ? ಶಿವಮೊಗ್ಗ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಈ ರೀತಿಯ ಪ್ರವೃತ್ತಿ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. 
ನಾಗರೀಕರಿಗೆ, ವಾಹನ ಸವಾರರಿಗೆ ಅನಾನುಕೂಲವಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸಂಬಂಧಿಸಿದವರಿಗೆ ಏಕೆ ಸೂಚನೆ ನೀಡುತ್ತಿಲ್ಲ? ಅವರ ಹಿತಾಸಕ್ತಿಗಾಗಿ ಸಾವಿರಾರು ನಾಗರೀಕರಿಗೇಕೆ ಸಂಕಷ್ಟು ಉಂಟು ಮಾಡಬೇಕು?' ಎಂದು ನಾಗರೀಕರೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News