ಕಾನ್ಪುರ ಐಐಟಿಯಲ್ಲಿ ಹಿಂದೂ ಪವಿತ್ರಗ್ರಂಥಗಳ ಸೇವೆ

Update: 2018-01-11 04:23 GMT

ಲಕ್ನೋ, ಜ.11: ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಿಂದೂ ಪವಿತ್ರ ಗ್ರಂಥಗಳ ಪಠ್ಯ ಮತ್ತು ಆಡಿಯೊ ಸೇವೆಯನ್ನು ಆರಂಭಿಸಿದ ದೇಶದ ಮೊಟ್ಟಮೊದಲ ಎಂಜಿನಿಯರಿಂಗ್ ಕಾಲೇಜು ಎನಿಸಿಕೊಂಡಿದೆ. ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಐಐಟಿಯ ಅಧಿಕೃತ ವೆಬ್‌ಸೈಟ್  www.gitasupersite.iitk.ac.in.ನಲ್ಲಿ ಈ ಸೇವೆ ಲಭ್ಯವಿದೆ.

ಶ್ರೀಮದ್ ಭಗವದ್ಗೀತಾ, ರಾಮಚರಿತಮಾನಸ, ಬ್ರಹ್ಮಸೂತ್ರ, ಯೋಗಸೂತ್ರ, ಶ್ರೀರಾಮ ಮಂಗಲ ದೇಶಜಿ ಮತ್ತು ನಾರದ ಭಕ್ತಿಸೂತ್ರಗಳು ಸೇರಿದಂತೆ ಒಂಬತ್ತು ಪವಿತ್ರ ಗ್ರಂಥಗಳ ಬರಹಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಹೊಸದಾಗಿ ನೀಡುತ್ತಿರುವ ಇಂಥ ಗ್ರಂಥಗಳಲ್ಲಿ ಇತ್ತೀಚಿನ ಸೇರ್ಪಡೆಯೆಂದರೆ ವಾಲ್ಮೀಕಿ ರಾಮಾಯಣದ ಸುಂದರಕಾಂಡ ಮತ್ತು ಬಾಲಖಂಡಗಳ ಸಂಸ್ಕೃತ ಅವತರಣಿಕೆ. ರಾಮಮಂದಿರ ವಿವಾದ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ಆರಂಭಿಸುವ ಕೆಲವೇ ದಿನಗಳ ಮೊದಲು ಪ್ರತಿದಿನ ಈ ಮಾಹಿತಿಗಳನ್ನು ವೆಬ್‌ಸೈಟ್ ಮೂಲಕ ನೀಡುವ ಸೇವೆ ಆರಂಭಿಸಲಾಗಿದೆ.

ಐಐಟಿಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳ ಸನ್ನದು ಸಾಮಾನ್ಯವಾಗಿ ಸಂಸ್ಥೆಗೆ ನೆರವು ನೀಡುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ನಿರ್ದೇಶಿಸಲ್ಪಟ್ಟಿರುತ್ತವೆ. ಈ ಯೋಜನೆಗೆ 2001ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ 25 ಲಕ್ಷ ರೂ. ನೀಡಿತ್ತು.

"ಐಐಟಿಯೊಳಗಿನ ತಜ್ಞರು ಮತ್ತು ಹೊರಗಿನ ತಜ್ಞರು ಸೇರಿ ಈ ಯೋಜನೆ ಬಗ್ಗೆ ಕಾರ್ಯನಿರ್ವಹಿಸಿದ್ದು, ಪವಿತ್ರದ ಧರ್ಮಗ್ರಂಥಗಳು ಲಭ್ಯವಾಗುವಂತೆ ಮಾಡಲಾಗಿದೆ. ಇದು ವಿಶ್ವದಲ್ಲೇ ಮೊಟ್ಟಮೊದಲ ಪ್ರಯತ್ನ" ಎಂದು ಭಾರತೀಯ ಭಾಷಾ ತಂತ್ರಜ್ಞಾನ ಸೊಲ್ಯೂಶನ್ಸ್ ಸಂಪನ್ಮೂಲ ಕೇಂದ್ರದ ಪ್ರೊಫೆಸರ್ ಟಿ.ವಿ.ಪ್ರಭಾಕರ್ ಹೇಳಿದ್ದಾರೆ.

ಈ ಕುರಿತು ಬಂದಿರುವ ಟೀಕೆಗಳನ್ನು ಪ್ರಭಾಕರ್ ಹಾಗೂ ಐಐಟಿ ನಿರ್ದೇಶಕ ಮಹೇಂದ್ರ ಅಗರ್‌ವಾಲ್ ತಳ್ಳಿಹಾಕಿದ್ದಾರೆ. ಯಾವ ಒಳ್ಳೆಯ ಕೆಲಸವೂ ಟೀಕೆಗಳಿಂದ ಮುಕ್ತವಲ್ಲ. ಈ ವಿನೂತನ ಹಾಗೂ ಪವಿತ್ರ ಕಾರ್ಯಕ್ಕೆ ಬಂದಿರುವ ಟೀಕೆಗಳನ್ನು ಎದುರಿಸಲು ನಾವು ಸಿದ್ಧ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News