ಜಸ್ಟಿಸ್ ಲೋಯಾ ಶಂಕಾಸ್ಪದ ಸಾವು ಪ್ರಕರಣ: ತನಿಖೆ ಕೋರಿದ್ದ ಪಿಐಎಲ್ ವಿಚಾರಣೆ ಜ.23ಕ್ಕೆ

Update: 2018-01-11 07:06 GMT

ಮುಂಬೈ, ಜ.11: ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್ ಬಿ.ಎಚ್. ಲೋಯಾ ಅವರ ಶಂಕಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರ ಮುಖಾಂತರ ನಡೆಸಬೇಕೆಂದು ಬಾಂಬೆ ಲಾಯರ್ಸ್ ಅಸೋಸಿಯೇಶನ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲಿನ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಜನವರಿ 23ರಂದು ಕೈಗೆತ್ತಿಕೊಳ್ಳಲಿದೆ.

ಪತ್ರಿಕಾ ವರದಿಯೊಂದನ್ನಾಧರಿಸಿ ಅಸೋಸಿಯೇಶನ್ ಈ ಪ್ರಕರಣದ ತನಿಖೆ ನಡೆಸಬೇಕೆಂದು ಕೋರಿತ್ತು. ನವೆಂಬರ್ 21, 2017ರಂದು ದಿ ಕಾರವಾನ್ ಮ್ಯಾಗಝಿನ್ ಪ್ರಕಟಿಸಿದ ವರದಿಯೊಂದನ್ನೂ ಅಪೀಲಿನಲ್ಲಿ ಉಲ್ಲೇಖಿಸಲಾಗಿತ್ತಲ್ಲದೆ, ಈ ವರದಿಯಲ್ಲಿ ದಿವಂಗತ ಲೋಯಾ ಅವರ ಸೋದರಿ ಅನುರಾಧಾ ಬಿಯಾನಿ ತಮ್ಮ ಸೋದರನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಬಗ್ಗೆಯೂ ಹೇಳಲಾಗಿದೆ.

ಆಗಿನ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಮೋಹಿತ್ ಶಾ ತಮಗೆ ಈ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡಲು ನೂರು ಕೋಟಿ ಲಂಚದ ಆಮಿಷವೊಡ್ಡಿದ ಬಗ್ಗೆ ಜಸ್ಟಿಸ್ ಲೋಯಾ ತಮ್ಮೊಂದಿಗೆ ಹೇಳಿಕೊಂಡಿರುವ ಬಗ್ಗೆಯೂ ಅವರ ಸೋದರಿ ಬಹಿರಂಗಪಡಿಸಿದ್ದನ್ನು ಅಪೀಲಿನಲ್ಲಿ ತಿಳಿಸಲಾಗಿದೆ.

ಲೋಯಾ ಸಾವಿನ ನಂತರ ಹೊಸ ನ್ಯಾಯಾಧೀಶರು ನೇಮಕಗೊಳ್ಳುತ್ತಲೇ ಆಗ ಗುಜರಾತ್ ಸಚಿವರಾಗಿದ್ದ ಅಮಿತ್ ಶಾ ಅವರ ಮೇಲಿನ ಆರೋಪಗಳನ್ನು ಕೈಬಿಡಲಾಗಿತ್ತು ಎಂಬುದನ್ನೂ ಅನುರಾಧಾ ಹೇಳಿದ್ದನ್ನು ವರದಿಯಲ್ಲಿ ಉಲ್ಲೇಖಿಸಿರುವುದನ್ನು ಅಪೀಲಿನಲ್ಲಿ ವಿವರಿಸಲಾಗಿದೆ.
ಲೋಯಾ ಅವರ ಸಾವಿನ ಹಿಂದೆ ಹಲವಾರು ಶಂಕೆಗಳು ಹಾಗೂ ಊಹಾಪೋಹಗಳಿರುವುದರಿಂದ ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಸೋಸಿಯೇಶನ್ ವಕೀಲರು ನ್ಯಾಯಾಲಯಕ್ಕೆ ಮನಗಾಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News