ದಲಿತ ಮುಖ್ಯಮಂತ್ರಿಯ ಸುಳಿವು ನೀಡಿದರೇ ಸಿಎಂ ಸಿದ್ದರಾಮಯ್ಯ?

Update: 2018-01-11 16:08 GMT

ಮೈಸೂರು,ಜ.11: ಲೋಕೋಪಯೋಗಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿ ಇದ್ದಾರೆ ಎನ್ನುವ ಮೂಲಕ ದಲಿತ ಮುಖ್ಯಮಂತ್ರಿ ಚರ್ಚೆಗೆ ಮತ್ತೆ ನಾಂದಿ ಹಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ನಗರದ ಮೈಸೂರು-ಊಟಿ ರಸ್ತೆಯ ಶ್ರೀಪ್ರಸನ್ನ ಚಿಂತಾಮಣಿ ಇಷ್ಟಾರ್ಥ ಸಿದ್ಧಿ ಬುದ್ಧಿ ಗಣಪತಿ ದೇವಸ್ಥಾನದ ಬಳಿ ಇರುವ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ವತಿಯಿಂದ ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ನವಕರ್ನಾಟಕ ನಿರ್ಮಾಣ ಯಾತ್ರೆಯನ್ನು ಬೀದರ್ ನಿಂದ ಆರಂಭಿಸಿದ್ದೇನೆ. ಈಗಾಗಲೇ ರಾಜ್ಯದ 28 ಜಿಲ್ಲೆಗಳನ್ನು ಸುತ್ತಿ ಬಂದಿದ್ದೇನೆ. ನಮ್ಮ ಪಕ್ಷದ ಆಡಳಿತವನ್ನು ಜನ ತೃಪ್ತಿಪಟ್ಟಿದ್ದಾರೆ. ಅವರ ಉತ್ಸಾಹ ನೋಡಿದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳುತ್ತಿದ್ದಂತೆ, ಮುಂದಿನ ಬಾರಿ ನೀವೆ ಮುಖ್ಯಮಂತ್ರಿಯಾಗಬೇಕು ಎಂದು ನೆರೆದಿದ್ದ ಸಭಿಕರು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಹೇ, ಹಾಗೆಲ್ಲ ಅನ್ನಬೇಡಿ. ಮಹದೇವಪ್ಪ ಬೇಸರ ಪಟ್ಟುಕೊಳ್ಳುತ್ತಾನೆ. ಮಹದೇವಪ್ಪ ಕೂಡ ಮುಖ್ಯಮಂತ್ರಿ ರೇಸ್‍ನಲ್ಲಿ ಇದ್ದಾನೆ. ಹೀಗೆ ಹಲವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಪಡುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಪ್ರಾರಂಭಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಯಾವ ಸರ್ಕಾರಗಳು ಮಾಡಿರದಷ್ಟು ಅಭಿವೃದ್ದಿ ಕಾರ್ಯಗಳನ್ನು ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಕರ್ನಾಟಕದ ಇತಿಹಾಸದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ನಮ್ಮದು. ಪ್ರಣಾಳಿಕೆಯಲ್ಲಿ ಹೇಳಿದ್ದಕ್ಕಿಂತ ಇನ್ನೂ ಹೆಚ್ಚಿನ ಕೆಲಸವನ್ನು ನಾವು ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ವಿವರಿಸಿದರು.

ಬರಿ ಬಾಯಿ ಮಾತಲ್ಲಿ ಬಿಜೆಪಿಯವರು ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಅವರದು ಡೋಂಗಿ. ಇಂತಹ ರಾಜಕೀಯ ಡೋಂಗಿಗಳು ಅಧಿಕಾರಕ್ಕೆ ಬರದ ರೀತಿ ನೋಡಿಕೊಳ್ಳಿ ಎಂದ ಸಿಎಂ, ಬಿಜೆಪಿಯವರ ಪರಿವರ್ತನಾ ರ್ಯಾಲಿ, ಕುಮಾರಸ್ವಾಮಿಯವರ ವಿಕಾಸ ಯಾತ್ರೆಯಾಗಲಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಏಪ್ರಿಲ್‍ನಲ್ಲಿ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಶ್ರೀನಿವಾಸಪ್ರಸಾದ್ ನನ್ನ ವಿರುದ್ದ ತೊಡೆತಟ್ಟಿದರು. ಈ ಚುನಾವಣೆ ನನಗೂ ಸಿದ್ಧರಾಮಯ್ಯನಿಗೂ ಎಂದು ಅಬ್ಬರಿಸಿದರು. ಈ ಚುನಾವಣೆ 2018 ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದರು. ಆದರೆ ಯಡಿಯೂರಪ್ಪ ಅವರ 150 ಮಿಷನ್ ಟುಸ್ಸಾಯಿತು. ಇಂದು ಬಿಜೆಪಿಯವರ ಮಿಷನ್ 50 ಆಗಿದೆ ಎಂದು ವ್ಯಂಗ್ಯವಾಡಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಮತದಾರರ ಉಪಕಾರವನ್ನು ಮರೆಯಲು ಸಾಧ್ಯವಿಲ್ಲ, ಕಳೆದ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ನಮ್ಮ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿಗೆ ಆಶೀರ್ವಾದ ಮಾಡಿದ್ದೀರಿ, ನಮ್ಮ ಮೇಲೆ ತೊಡೆತಟ್ಟಿದವರಿಗೆ ತಕ್ಕ ಪಾಠ ಕಲಿಸಿದ್ದೀರಿ, ನಿಮಗೆ ಎಂದೆಂದೂ ನಾನು ಚಿರಋಣಿ ಎಂದು ಕೈಮುಗಿದರು.

ನಾನು ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ನಂಜನಗೂಡು ವಿಧಾನಸಭಾ ಕ್ಷೇತ್ರದ ಸುಮಾರು 400ಕೋಟಿ ಗೂ ಹೆಚ್ಚು  ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಿದ್ದೇನೆ. ನಂಜನಗೂಡು ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನವನ್ನು ನೀಡಿದ್ದೇನೆ. ಕೇತ್ರದ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಯಾರೇ ಬಂದರೂ ಇಲ್ಲ ಎನ್ನುವುದಿಲ್ಲ. ಈಗಾಗಲೇ ಹುಲ್ಲಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಾಗಿದೆ. ಹೈಟೆಕ್ ಬಸ್‍ಸ್ಟಾಂಡ್, ಬೃಹತ್ ಮಿನಿ ವಿಧಾನ ಸೌಧ, ನಂಜನಗೂಡು-ಹೆಜ್ಜಿಗೆ ಸೇತುವೆಯನ್ನು ಉದ್ಘಾಟನೆ ಮಾಡಿದ್ಧೇನೆ. ಮುಂಬರುವ ಏಪ್ರಿಲ್ ಕೊನೆವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಇರಬಹುದು. ನಮ್ಮ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿಗೆ ಆಶೀರ್ವಾದ ಮಾಡಿ ಎನ್ನುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಕಳಲೆ ಕೇಶಮೂರ್ತಿಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

ನಾವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ. ಎಸ್‍ಸಿಪಿ, ಎಸ್‍ಟಿಪಿ ಅನುದಾನ ತಲುಪಲು ಯಶಸ್ವಿಯಾಗಿದ್ದೇವೆ. ನಮ್ಮ ಉದ್ಧೇಶ ಹಸಿವು, ಬಡತನ, ಗುಡಿಸಲು, ಅಪೌಷ್ಠಿಕ ಮುಕ್ತ ರಾಜ್ಯ ಆಗಬೇಕು ಎಂಬುವುದಾಗಿದೆ. ಹಾಗಾಗಿ ನವ ಕರ್ನಾಟಕ ನಿರ್ಮಾಣ ನಮ್ಮ ಗುರಿ ಎಂದು ಹೇಳಿದರು.

ಶಾಸಕ ಕಳಲೆ ಕೇಶವಮೂರ್ತಿ ನಂಜನಗೂಡು ಅಭಿವೃದ್ದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೋಪಯೋಗಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಣ್ಣ ಕೈಗಾರಿಕೆ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ, ಸಂಸದ ಧ್ರುವನಾರಾಯಣ, ಶಾಸಕರಾದ ವಾಸು, ಧರ್ಮಸೇನಾ, ಜಿ.ಪಂ.ಅಧ್ಯಕ್ಷೆ ನಯೀಮ ಸುಲ್ತಾನ ನಜೀರ್ ಅಹಮದ್, ವರುಣ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ಧರಾಮಯ್ಯ, ಟೀ.ನರಸೀಪುರ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ಜಿ.ಪಂ. ಸದಸ್ಯರಾದ ದಯಾನಂದ ಮೂರ್ತಿ, ಡಾ.ಪುಷ್ಪಾ ಅಮರ್‍ನಾಥ್, ಲತಾ ಸಿದ್ಧಶೆಟ್ಟಿ, ಪುಷ್ಪ ನಾಗೇಶ್ ರಾಜ್, ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ನಗರಸಭಾ ಅಧ್ಯಕ್ಷೆ ಪುಷ್ಪ ಕಮಲೇಶ್, ಉಪಾಧ್ಯಕ್ಷ ಪ್ರದೀಪ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ನಂದಕುಮಾರ್, ಎಚ್.ಎ.ವೆಂಕಟೇಶ್, ಮಲ್ಲಿಗೆ ವೀರೇಶ್, ಡಿ.ಧ್ರುವಕುಮಾರ್, ಸೀತಾರಾಂ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿ.ಪಂ. ಸಿಇಓ ಶಿವಶಂಕರ್, ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News