×
Ad

ಕುಂಬಳಕಾಯಿ ಕಳ್ಳರೆಂದರೆ ಬಿಜೆಪಿ ನಾಯಕರು ಹೆಗಲು ಮುಟ್ಟಿ ನೋಡುತ್ತಾರೆ: ಸಿಎಂ

Update: 2018-01-11 21:10 IST

ಮೈಸೂರು,ಜ.11: ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳನ್ನು ಉಗ್ರಗಾಮಿಗಳೆಂದು ಕರೆದಿದ್ದೇನೆ. ಹಿಂದುತ್ವದ ಹೆಸರನಲ್ಲಿ ಕೋಮು ಭಾವನೆಗೆ ಧಕ್ಕೆ ತರಬಾರದು. ಕುಂಬಳ ಕಾಯಿ ಕಳ್ಳರೆಂದರೆ ಬಿಜೆಪಿ ನಾಯಕರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರಗೂರು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ಹಿಂದು, ಕೋಮು ಸೌಹಾರ್ಧತೆ ಕಾಪಾಡುತ್ತೇನೆ ಎಂದು ಹೇಳಿದರು.

ಇನ್ನು ಕೃಷಿ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ ಮೂರುವರೆ ವರ್ಷಗಳಿಂದ ಈ ಸಂಬಂಧ ಏನು ಮಾಡಿಲ್ಲ. ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದರು.

ಕೇಂದ್ರದಿಂದ ಬಿಡುಗಡೆಯಾಗಿರುವ ಹಣದ ಖರ್ಚಿನ ಲೆಕ್ಕ ಕೇಳಲು ಅಮಿತ್ ಶಾ ಯಾರು? ಅವರೇನು ರಾಜ್ಯದ ಪರವಾಗಿ ಪ್ರತಿನಿಧಿಸುತ್ತಿರುವ ಸಂಸದರೇ, ಕೇಂದ್ರ ಸಚಿವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಮಿತ್ ಶಾಗೆ ಲೆಕ್ಕ ಕೊಡುವ ಅವಶ್ಯಕತೆ ಇಲ್ಲ. ರಾಜ್ಯದ ಜನ ಕೇಳಿದರೆ ಕೊಡುವೆ. ಅಲ್ಲದೇ ನಮ್ಮ ತೆರಿಗೆ ಹಣವನ್ನು ಶೇ.60 ರಷ್ಟು ಕೇಂದ್ರ ಸರ್ಕಾರ ಇಟ್ಟುಕೊಂಡು ನಮ್ಮ ತೆರಿಗೆಯಲ್ಲಿಯೇ ಶೇ.40 ರಷ್ಟು ಮಾತ್ರ ನಮಗೆ ಕೊಡುತ್ತಿದೆ. ಕೇಂದ್ರ ಸರ್ಕಾರ ನಾಲ್ಕು ವರ್ಷಗಳಿಂದ 11 ಸಾವಿರ ಕೋಟಿ ಹಣ ಕಡಿಮೆ ನೀಡಿ ತಾರತಮ್ಯ ಮಾಡಿದೆ ಎಂದು ದೂರಿದರು. 

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಗುಜರಾತ್‍ಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರು. ಮೋದಿ ಅಂದು ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಂದು ಕೇಂದ್ರ ಬಿಡುಗಡೆ ಮಾಡಿದ್ದ ಹಣ ಅಮಿತ್ ಶಾ ಕೊಟ್ಟಿದ್ದಾರಾ ಎಂದು ಸಿಎಂ ತಿರುಗೇಟು ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News