ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ನ್ಯಾಯಾಧೀಶರಿಗೆ ದೂರು
ಮಂಡ್ಯ, ಜ.11: ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬೇಬಿಬೆಟ್ಟ ಕಾವಲ್ ಪ್ರದೇಶದ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕಾನೂನು ಸಮರ ಮುಂದುವರಿಸಿರುವ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಸಿ.ಎಸ್.ಪುಟ್ಟರಾಜು ಸೇರಿದಂತೆ 8 ಮಂದಿ ವಿರುದ್ಧ ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ, ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ, ಸಿ.ಎಸ್.ತಿಬ್ಬೇಗೌಡ, ಸಿ.ಶಿವಕುಮಾರ್, ಸಿ.ಅಶೋಕ, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು ವಿರುದ್ಧ ಗುರುವಾರ ಜಿಲ್ಲಾ ಪ್ರಧಾನ ಸೆಷನ್ಸ್ ಜಡ್ಜ್ ಮತ್ತು ಡೆಸಿಗ್ನೇಟೆಡ್ ಸ್ಪೆಷಲ್ ಜಡ್ಜ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1998ರ ಚಾಪ್ಟರ್ 11 ಮತ್ತು ಲೋಕಾಯುಕ್ತ ವಿಷೇಷ ನ್ಯಾಯಾಲಯದಲ್ಲಿ ದೂರು ನೀಡಲಾಗಿದೆ.
ಬೇಬಿಬೆಟ್ಟದ ಕಾವಲು ಸರ್ವೆ ನಂ.1ರಲ್ಲಿನ 1,623 ಎಕರೆ ಜಮೀನು ಮೈಸೂರು ಸಂಸ್ಥಾನದ ಮಹಾರಾಜರಿಗೆ ಸೇರಿದ ಸ್ವತ್ತಾಗಿದ್ದು, ಮಹಾರಾಜರು ಅಮೃತ್ ಮಹಲ್ ಕಾವಲ್ ತಳಿ ರಾಸುಗಳ ಅಭಿವೃದ್ಧಿಗೆ ಉಪಯೋಗಿಸುತ್ತಿದ್ದ ಹುಲ್ಲುಗಾವಲು ಪ್ರದೇಶವಾಗಿತ್ತದೆ. ಆದರೆ, ಅಕ್ರಮ ದಾಖಲೆ ಸೃಷ್ಟಿಸಿಕೊಂಡು ಅಧಿಕಾರಿಗಳಿಂದ ಪರವಾನಗಿ ಪಡೆದು ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಕ್ಕೆ ಬರಬೇಕಾದ ರಾಜಧನವನ್ನು ನಷ್ಟಮಾಡಿ ಅಧಿಕಾರದ ಪ್ರಭಾವದಿಂದ ಆರೋಪಿಗಳಿಗೆ ಗಣಿಗಾರಿಕೆ ನಡೆಸಲು ರಹದಾರಿ ನೀಡಿದ್ದಾರೆ ಎಂದು ರವೀಂದ್ರ ಆರೋಪಿಸಿದ್ದು, ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ.