×
Ad

ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ 1400 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-01-11 22:23 IST

ಮೈಸೂರು,ಜ.11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಗ್ಗಡ ದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 13 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ನೂತನವಾಗಿ ಘೋಷಣೆಯಾದ ಸರಗೂರು ತಾಲೂಕನ್ನು ಉದ್ಘಾಟಿಸಿದರು.

ಸರಗೂರು ಪಟ್ಟಣದಲ್ಲಿ ಗುರುವಾರ  ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 113 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರಕ್ಕೆ 1400 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಇದಕ್ಕೆ ಹೆಚ್ಚು ಅನುದಾನ ನೀಡಬೇಕು. ನೀರಾವರಿ, ಕುಡಿಯುವ ನೀರು, ಲೋಕೋಪಯೋಗಿ ಇಲಾಖೆಗಳಲ್ಲಿ ಸಾಕಷ್ಟು ಅನುದಾನ ನೀಡಲಾಗಿದೆ. ಯಾವುದೇ ಸರ್ಕಾರದಲ್ಲಿ ಒಂದು ಕ್ಷೇತ್ರದಲ್ಲಿ ಇಷ್ಟೊಂದು ಅನುದಾನ ನೀಡಿಲ್ಲ. ಇದನ್ನು ನಾನು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಲೋಕೋಪಯೋಗಿ ಇಲಾಖೆ ಒಂದರಲ್ಲೇ 200 ಕೋಟಿ ರೂ. ನೀಡಲಾಗಿದೆ. ನೀರಾವರಿಗೆ 400 ಕೋಟಿರೂ.ಗಳನ್ನು ನೀಡಲಾಗಿದೆ. ಹಿಂದುಳಿದ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುತ್ತಿದ್ದೇವೆ ಎಂದು ಹೇಳಿದರು.

ನಾವು ಪ್ರತಿಪಕ್ಷಗಳಿಗೆ ಹೇಳುತ್ತಿದ್ದೇನೆ. ನಾವು ಏನು ಹೇಳಿದ್ದೇವೆ, ಏನು ಮಾಡಿದ್ದೇವೆ. ನೀವು ಕೇಂದ್ರದಲ್ಲಿ ಏನು ಹೇಳಿದ್ದೀರಿ, ಏನು ಮಾಡಿದ್ದೀರಿ. ಚರ್ಚೆ ಮಾಡೋಣ ಬನ್ನಿ ಎಂದಿದ್ದೇನೆ. ಅವರು ಬರಲಿಲ್ಲ. ಸತ್ಯ ಹೇಳಿ ಬದುಕೋದು ಕಷ್ಟ. ಆದ್ದರಿಂದ ಸುಳ್ಳನ್ನೇ ನೂರು ಬಾರಿ ಹೇಳುವ ಮೂಲಕ ಸುಳ್ಳನ್ನೇ ನಿಜವಾಗಿಸಲು ಪ್ರಯತ್ನಿಸುತ್ತಾರೆ ಎಂದರು. ಅಮಿತ್ ಶಾ ಲೆಕ್ಕ ಕೊಡಿ ಎಂದು ಕೇಳುತ್ತಾರೆ. ನಾನು ಲೆಕ್ಕ ಕೊಡಬೇಕಾಗಿರೋದು ಅವರಿಗಲ್ಲ. ಕರ್ನಾಟಕ ರಾಜ್ಯದ ಜನರಿಗೆ ಎಂದರು. 

ಇಡೀ ದೇಶದಲ್ಲಿ ಕರ್ನಾಟಕ ನೇರ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಸಂವಿಧಾನಬದ್ಧವಾಗಿ ಆಯಾ ರಾಜ್ಯಕ್ಕೆ ಪಾಲು ಕೊಡಬೇಕು ಎಂದು ಹದಿನಾಲ್ಕನೇ ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ. ಅದರ ಪಾಲು ನಮಗೆ ಬರುತ್ತದೆ. ರಾಜ್ಯಗಳಿಗೆ ಎರಡು ಬಗೆಯ ಅನುದಾನ ಬರುತ್ತದೆ. ಒಂದು ಕೇಂದ್ರ ತೆರಿಗೆಗಳ ಪಾಲು ಮತ್ತೊಂದು ಅನುದಾನಗಳು. ಅಮಿತ್ ಶಾ ಅವರಿಗೆ ಸಂವಿಧಾನ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು. 

ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಬಂದಿದ್ದರು. ಅವರು ಸ್ವತಃ ಹಣಕಾಸು ತಜ್ಞರು. ಅವರು ಕರ್ನಾಟಕ ರಾಜ್ಯ ಆರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದಿದ್ದಾರೆ.

ನಾವು 2002ರಲ್ಲಿ ವಿತ್ತೀಯ ಹೊಣೆಕಾರಿಕೆ ಕಾಯ್ದೆ ಜಾರಿಗೊಳಿಸಿದ್ದೇವೆ. ಅವುಗಳಲ್ಲಿ ಕೆಲ ಮಾನದಂಡಗಳಿವೆ. ಅವುಗಳ ಅನ್ವಯ ಇರುವ ರಾಜ್ಯಗಳು ಸುಸ್ಥಿತಿಯಲ್ಲಿರುತ್ತವೆ ಎಂದರ್ಥ. ಅದರ ಅನ್ವಯವೇ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು. ಫೆಬ್ರವರಿಯಲ್ಲಿ ನಾನು ಮಂಡಿಸಲಿರುವ ಬಜೆಟ್ 2,06,000ಕೋಟಿ ರೂ. ಇದೆ. ರಾಜ್ಯ ದಿವಾಳಿ ಎದ್ದಿದೆ ಎಂದು ಸುಳ್ಳು ಆರೋಪ ಮಾಡುತ್ತಾರೆ. 2013ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಿಗದಿಪಡಿಸಬೇಕು ಮತ್ತು ಈ ಹಣ ಅದೇ ವರ್ಷ ಖರ್ಚಾಗಬೇಕು ಎಂಬ ಕಾನೂನು ಮಾಡಿದೆವು. ಎಸ್.ಎಸ್. ಎಸ್.ಪಿ.ಟಿ. ಎಸ್.ಪಿಯಲ್ಲಿ ಹಿಂದಿನ ಸರ್ಕಾರ 21,000 ಕೋಟಿ ರೂ. ಖರ್ಚು ಮಾಡಿತ್ತು. ನಾವು ಬಂದ ಮೇಲೆ ಈ ಕಾನೂನಿನಲ್ಲಿ 86,000 ಕೋಟಿ ರೂ. ಖರ್ಚು ಮಾಡಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕಾಂಟ್ರಾಕ್ಟ್ ಗಳಲ್ಲಿ ಮೀಸಲಾತಿ ನೀಡಿದ್ದೇವೆ. ಇಡೀ ದೇಶದಲ್ಲಿ ಕಾಂಟ್ರಾಕ್ಟ್ ನಲ್ಲಿ ಮೀಸಲಾತಿ ನೀಡುವ ಕಾನೂನು ತಂದಿರುವುದು ನಾವು ಪ್ರಥಮ ಎಂದು ಸಿದ್ಧರಾಮಯ್ಯ ಹೇಳಿದರು.

ಹಾಡಿಗಳಲ್ಲಿ, ಹಟ್ಟಿಗಳಲ್ಲಿ ವಾಸಿಸುವವರಿಗೆ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ರೀತಿಯಲ್ಲಿ ವಾಸಿಸುವವನೇ ಮನೆಯೊಡೆಯ ಎಂಬ ಕಾನೂನು ತಂದಿದ್ದೇವೆ. ದಲಿತರ ಬಗ್ಗೆ ಕಾಳಜಿಯೇ ಇಲ್ಲದೆ ಬಿಜೆಪಿ ನಡಿಗೆ ದಲಿತರ ಮನೆಗೆ ಎಂಬ ನಾಟಕ ಮಾಡುತ್ತಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಎಲ್ಲರೂ ಹೋಗಿ ಹೋಟೆಲ್ ನಿಂದ ತಿಂಡಿ ತರಿಸಿ ತಿಂದು ಬರುತ್ತಾರೆ. ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪು ಜಯಂತಿಯಲ್ಲಿ ಟಿಪ್ಪು ಪೇಟ ಧರಿಸಿ, ಖಡ್ಗ ಹಿಡಿದು ಟಿಪ್ಪು ಒಬ್ಬ ದೇಶಪ್ರೇಮಿ ಎಂದಿದ್ದರು. ಈಗ ಟಿಪ್ಪು ಒಬ್ಬ ಮತಾಂಧ ಎನ್ನುತ್ತಾರೆ ಎಂದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಉಗ್ರಪ್ಪ ಸಾಲ ಮನ್ನಾ ಮಾಡಿ ಎಂದರೆ, ಸಾಲ ಮಾಡಲಿಕ್ಕೆ ದುಡ್ಡು ಎಲ್ಲಿಂದ ತರಲಿ? ನಾನೇನು ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಟ್ಟಿದ್ದೀನಾ? ಎಂದು ಪ್ರಶ್ನಿಸಿದ್ದರು. ಈಗ ಸಾಲ ಮನ್ನಾ ಮಾಡಿ ಎನ್ನುತ್ತಾರೆ ಎಂದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವೆ ಗೀತಾ ಮಹದೇವಪ್ರಸಾದ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಧರ್ಮಸೇನಾ, ವಾಸು ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News