ಪ್ರಮುಖ ಆರೋಪಿ ಸಂತೋಷ್ ನನ್ನು ಮೂಡಿಗೆರೆಗೆ ಕರೆತಂದ ಪೊಲೀಸರು
ಚಿಕ್ಕಮಗಳೂರು, ಜ.11: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮೂಡಿಗೆರೆ ಡಿ.ಎಸ್.ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂತೋಷ್ ನನ್ನು ಪೊಲೀಸರು ಬೆಂಗಳೂರಿನಿಂದ ಮೂಡಿಗೆರೆಗೆ ಕರೆ ತಂದಿದ್ದಾರೆ.
ಮೂಡಿಗೆರೆ ಪಟ್ಟಣದೊಳಗೆ ಪ್ರವೇಶಿಸಿ ಮರುಕ್ಷಣವೇ ಎಂಜಿಎಂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿ ಸಂತೋಷನ ಆರೋಗ್ಯ ತಪಾಸಣೆ ನಡೆಸಿದರು. ನಂತರ ಹೆಚ್ಚಿನ ವಿಚಾರಣೆಗಾಗಿ ಸಂತೋಷ್ ನನ್ನು ಮೂಡಿಗೆರೆಯ ಗೌಪ್ಯ ಸ್ಥಳಕ್ಕೆ ಕರೆದೊಯ್ದರು.
ಕಾಲೇಜು ವಿದ್ಯಾರ್ಥಿನಿಯಾಗಿದ್ದ ಮೂಡಿಗೆರೆ ಪಟ್ಟಣದ ಛತ್ರಮೈದಾನ ಬಡಾವಣೆಯ ನಿವಾಸಿ ಯಾದವ ಸುವರ್ಣ ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರಿಯಾಗಿರುವ ಧನ್ಯಶ್ರೀ ಜತೆಗಿನ ವಾಟ್ಸ್ ಆ್ಯಪ್ ಚಾಟ್ ಮೆಸೇಜ್‍ಗಳನ್ನುವಿವಿಧ ಗ್ರೂಪ್‍ಗಳಿಗೆ ಸಂತೋಷ್ ರವಾನೆ ಮಾಡಿದ್ದ. ಈತನ ಕುತಂತ್ರಕ್ಕೆ ಬಲಿಯಾದ ಧನ್ಯಶ್ರೀ ಜ.6ರಂದು ಆತ್ಮಹತ್ಯೆಗೆ ಶರಣಾಗಿದ್ದಳು.
ಪ್ರಕರಣವು ಗಮನ ಸೆಳೆಯುತ್ತಿದ್ದಂತೆ ಬುಧವಾರ ತಡ ರಾತ್ರಿ ಬೆಂಗಳೂರು ನಗರದಲ್ಲಿ ಮೂಡಿಗೆರೆ ಪಿಎಸ್‍ಐ ರಫೀಕ್ ಅವರು ಸಂತೋಷ್ ನನ್ನು ಬಂಧಿಸಿದ್ದರು. ಬೆಂಗಳೂರಿನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಸಂತೋಷ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೇಕಾರ್ ನಿವಾಸಿಯಾಗಿದ್ದಾನೆ.