ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ಸಿ.ಟಿ.ರವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

Update: 2018-01-12 11:40 GMT

ಚಿಕ್ಕಮಗಳೂರು, ಜ.12: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ಶಾಸಕ ಸಿ.ಟಿ.ರವಿ, ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಸಹಿತ ಹಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ಶಾಸಕ ಸಿ.ಟಿ.ರವಿ ಮಾತನಾಡಿ, ಸಿದ್ದರಾಮಯ್ಯ ಹೇಳಿಕೆ ಮತ್ತು ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾದನೆ ಎಂಬ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆಯನ್ನು ಖಂಡಿಸಿದರು. 

ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ, ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದನಕರಾಗುತ್ತಾರೆ. ಸಿಎಂ ಅವರ ಮಾತಿನಲ್ಲಿ ಬೆದರಿಕೆ ಇದೆ, ದಾಸ್ಯ ಇದೆ, ದುರಹಂಕಾರ ಇದೆ. ನಾವು ಯಾವತ್ತು ದುರಹಂಕಾರ, ಬೆದರಿಕೆ ರೀತಿ ಮಾತಾನಾಡಿಲ್ಲ ಎಂದರು. 

ಸತ್ಯದ ಪರ ಹೋರಾಟ ಮಾಡುವುದನ್ನು ಭಯೋತ್ಪಾದನೆ ಅಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸತ್ಯದ ಪರ ಹೋರಾಟ ಮಾಡುವುದನ್ನು ಭಯೋತ್ಪಾದನೆ ಎಂದು ಕರೆಯಲು ಯಾವ ಶಬ್ದಕೋಶ ಓದಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಭಯೋತ್ಪಾದನೆ ಅನ್ನುವುದಕ್ಕೆ ಶಬ್ದಕೋಶದಲ್ಲಿ ಬೇರೆ ಅರ್ಥವಿದೆ. ಅದನ್ನು ರಾಮಲಿಂಗರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡುವ ಸಿಎಂ ಸಿದ್ದರಾಮಯ್ಯ ನವರು ಕೂಡ ಓದಿಕೊಳ್ಳಲಿ ಎಂದು ಸಿ.ಟಿ.ರವಿ ಹೇಳಿದರು.

ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಪ್ರೇಂ ಕುಮಾರ್, ಸಿ.ಎಚ್.ಲೋಕೇಶ್, ವರಸಿದ್ದಿವೇಣುಗೋಪಾಲ್, ರೇಖಾ ಹುಲಿಯಪ್ಪಗೌಡ, ದೇವರಾಜ್ ಶೆಟ್ಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News