ಹುಲಿ ಭೀತಿ: ಆನೆಗಳ ಮೂಲಕ ಅರಣ್ಯಾಧಿಕಾರಿಗಳ ಕಾರ್ಯಾಚರಣೆ

Update: 2018-01-12 12:40 GMT

ಚಿಕ್ಕಮಗಳೂರು, ಜ.12: ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಹುಲಿ ಬಿಡಾರ ಹೂಡಿದೆ ಎನ್ನುವ ಗುಮಾನಿ ಹಿನ್ನೆಲೆಯಲ್ಲಿ ಸ್ಥಳೀಯರ ಆತಂಕವನ್ನು ಇಲ್ಲವಾಗಿಸಲು ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ಹುಲಿ ಸೆರೆಗೆ ಆನೆಗಳ ಬಳಕೆ ಮಾಡಲಾಗುತಿದ್ದು, ಆಶ್ಚರ್ಯ ಎನಿಸಿದರೂ ಸತ್ಯವಾಗಿದೆ. ಉದುಸೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಹುಲಿಯನ್ನು ಸೆರೆ ಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಆನೆಗಳ ಶಿಬಿರದಿಂದ ಪಳಗಿದ 3 ಆನೆಗಳ ಸಹಾಯ ಪಡೆದುಕೊಂಡು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸಕ್ಕರೆ ಬೈಲುನಿಂದ ಗಂಗೆ, ಗೀತಾ, ರಾಮು ಆನೆಗಳನ್ನು ಮೂಡಿಗೆರೆಗೆ ತರಲಾಗಿದ್ದು, ಉದುಸೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಉದುಸೆ ಗ್ರಾಮದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಹುಲಿಯ ಬಗ್ಗೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದೆ. ಆರಂಭದಲ್ಲಿ ನಾಗೇಶ್ ಎಂಬವರಿಗೆ ಸೇರಿದ ಮೂರು ಕರುಗಳನ್ನು ಕೊಂದು ತಿಂದಿದ್ದ ಹುಲಿ, ನಂತರ ಇತ್ತೀಚೆಗೆ ರಾತ್ರಿ ಸಮಯದಲ್ಲಿ ಅಣ್ಣೇಗೌಡ ಎಂಬವರ ಮೇಲೆ ದಾಳಿ ನಡೆಸಿ ಗಾಯ ಮಾಡಿತ್ತು.

ಹುಲಿ ಬಗ್ಗೆ ಭೀತಿ ಹೊಂದಿರುವ ಉದುಸೆ ಗ್ರಾಮದಲ್ಲಿ ಆನೆಗಳ ಮೇಲೆ ಅರಣ್ಯ ಸಿಬ್ಬಂದಿಗಳು ಗ್ರಾಮದ ಕಾಫಿ ತೋಟ, ಕಾಡು ಪೊದೆಗಳಲ್ಲಿ ಸಂಚಾರ ನಡೆಸಿ ಹುಲಿ ಇದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಲಾಗುವುದು. ಒಂದು ವೇಳೆ ಹುಲಿ ಕಂಡು ಬಂದಿದ್ದೇ ಆದಲ್ಲಿ ಅರಣ್ಯ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅರವಳಿಕೆ ತಜ್ಞರು ಅರವಳಿಕೆ ಮದ್ದು ಹಾರಿಸುವ ಮೂಲಕ ಹುಲಿಯನ್ನು ಹಿಡಿಯುವ ಭರವಸೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.   

ಉದುಸೆ ಗ್ರಾಮದ ಶೇಖರ್ ಎಂಬವರ ತೋಟದಂಚಿನಲ್ಲಿ ಈ ಹಿಂದೆ ಅರಣ್ಯ ಇಲಾಖೆ ಇಟ್ಟಿದ್ದ ಟ್ರಾಪಿಂಗ್ ಕ್ಯಾಮೆರಾದಲ್ಲಿ ಹುಲಿ ಕಾಣಿಸಿಕೊಂಡ ಬಳಿಕ ಅಣ್ಣೇಗೌಡರ ಮೇಲೆ ದಾಳಿ ನಡೆಸಿತ್ತು. ಇದಾದ ನಂತರ ಕೆಲವರಿಗೆ ತೋಟಗಳಲ್ಲಿ ಹುಲಿ ಅಥವಾ ಹುಲಿ ಹೆಜ್ಜೆ ಕಾಣಿಸಿರುವ ಊಹಾಪೋಹದ ಮಾತುಗಳು ಜನರನ್ನು ಭೀತಿಯಲ್ಲಿ ಮುಳುಗಿಸಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸ್ಥಳೀಯರಲ್ಲಿ ಹುಲಿ ಭೀತಿ ಇಲ್ಲವಾಗಿಸುವತ್ತ ದೃಡ ಹೆಜ್ಜೆ ಇಟ್ಟಿದೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ಮುದ್ದಣ್ಣ, ಆರ್‍ಎಫ್‍ಓ ಪ್ರಹ್ಲಾದ್, ಅರಣ್ಯಾಧಿಕಾರಿ ಶಿವಕುಮಾರ್ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News