ಮಡಿಕೇರಿ: ಎಪಿಎಂಸಿ ಆವರಣದಲ್ಲಿ ರೈತ ಸಂತೆ ಆರಂಭ

Update: 2018-01-12 12:02 GMT

ಮಡಿಕೇರಿ,ಜ.12 : ನಗರದ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗಿರುವ ರೈತ ಸಂತೆಗೆ ಶುಕ್ರವಾರ ಶಾಸಕ ಅಪ್ಪಚ್ಚು ರಂಜನ್ ವಿದ್ಯುಕ್ತವಾಗಿ ಚಾಲನೆ ನೀಡಿದರು. 

ರೈತರು ಸಾವಯವ ಮತ್ತು ವೈಜ್ಞಾನಿಕ ರೀತಿಯಲ್ಲಿ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ತಿಳಿದುಕೊಂಡು ತರಕಾರಿ ಕೃಷಿ ಕೈಗೊಂಡರೆ ಉತ್ತಮ ಲಾಭ ಪಡೆಯಬಹುದು. ಆರೋಗ್ಯಕ್ಕೆ ಉಪಯುಕ್ತವಾದ ಸಾವಯವ ತರಕಾರಿಗೆ ಭಾರೀ ಬೇಡಿಕೆ ಇದ್ದು, ಉತ್ತಮ ಬೆಲೆಯೂ ರೈತರಿಗೆ ದೊರೆಯಲಿದೆ. ಇದರಿಂದ ರೈತರು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಡಿಕೇರಿ ಎಪಿಎಂಸಿ ಆವರಣದಲ್ಲಿ ರೈತ ಸಂತೆ ಆಯೋಜಿಸುವ ಮೂಲಕ ರೈತರನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಿ ಬೆಂಬಲ ಬೆಲೆ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರು ರೈತ ಸಂತೆಯ ಪ್ರಯೋಜನಪಡೆದುಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ರೈತರು ತರಕಾರಿ ಬೆಳೆಯುತ್ತಿದ್ದು, ಸೂಕ್ತ ಮಾರುಕಟ್ಟೆ ದೊರೆಯದೆ ಮಧ್ಯವರ್ತಿಗಳ ಹಾವಳಿಯಿಂದ ಸಮರ್ಪಕ ಬೆಲೆಯನ್ನು ಪಡೆಯಲಾಗದ ಸ್ಥಿತಿ ತಲೆದೋರಿತ್ತು. ಆದರೆ ಮಡಿಕೇರಿ ಎಪಿಎಂಸಿ ರೈತ ಸಂತೆಗೆ ವೇದಿಕೆ ಒದಗಿಸಿದ್ದು, ಇದರಿಂದ ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರುವ ಅವಕಾಶ ದೊರೆತಿದೆ ಎಂದರು.

ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ದೇಶದಲ್ಲಿಯೇ ಜಾರಿಗೆ ತಂದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಪ್ರತಿ ರೈತರು ನೇರ ಮಾರುಕಟ್ಟೆಯ ಲಾಭ ಪಡೆಯುವ ದಿಸೆಯಲ್ಲಿ ಹೆಜ್ಜೆ ಇಡಬೇಕೆಂದು ಹೇಳಿದರಲ್ಲದೆ, ಮಡಿಕೇರಿಯ ರೈತ ಸಂತೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ರೈತ ಸಂತೆ ವಾರದ ಪ್ರತಿದಿನವೂ ನಡೆಯುವಂತಾಗಲಿ ಎಂದು ಆಶಿಸಿದರಲ್ಲದೆ, ರೈತ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಆ ಮೂಲಕ ರೈತರನ್ನು ಬೆಂಬಲಿಸಬೇಕೆಂದು ಸಲಹೆ ನೀಡಿದರು.

ಮತ್ತೋರ್ವ ವಿಧಾನ ಪರಿಷತ್ ಸದಸ್ಯೆ  ವೀಣಾ ಅಚ್ಚಯ್ಯ ಮಾತನಾಡಿ, ಎಪಿಎಂಸಿ ರೈತಸಂತೆ ಒಂದು ಉತ್ತಮ ಯೋಜನೆಯಾಗಿದ್ದು, ರೈತ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಿರುವುದರಿಂದ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಬಳಿಕ 3.5 ಲಕ್ಷ ವೆಚ್ಚದ ಕುಡಿಯುವ ನೀರಿನ ಘಟಕ ರೈತ ಸಂತೆ ಪ್ರಾಂಗಣ ಮತ್ತು ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು ಶಾಸಕರುಗಳು ಲೋಕಾರ್ಪಣೆಗೊಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಶಶಿ ಸುಬ್ರಮಣಿ, ಗೋಣಿಕೊಪ್ಪ ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ಹಲವು ಗಣ್ಯರು ರೈತ ಸಂತೆಗೆ ಸಾಕ್ಷಿಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News