ಮಡಿಕೇರಿ: ಬಿಜೆಪಿ, ಸಂಘಪರಿವಾರದಿಂದ ಪ್ರತಿಭಟನೆ

Update: 2018-01-12 12:07 GMT

ಮಡಿಕೇರಿ, ಜ.12 : ಬಿಜೆಪಿ, ಆರ್‍ಎಸ್‍ಎಸ್ ಮತ್ತು ಬಜರಂಗದಳದವರನ್ನು ಉಗ್ರವಾದಿಗಳೆಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈ ಹೇಳಿಕೆಯನ್ನು ಸಮರ್ಥಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪ್ರತಿಕೃತಿಗಳನ್ನು ದಹಿಸಿ ಜಿಲ್ಲಾ ಬಿಜೆಪಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿತು.

ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಹತ್ಯೆಯ ಹಿಂದಿರುವ ಸಂಘಟನೆಗಳನ್ನು ನಿಷೇಧಿಸಲು ಮುಂದಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ, ಮತ್ತು ದೇಶಭಕ್ತ ಸಂಘಟನೆಗಳನ್ನು ಉಗ್ರವಾದಿಗಳೆಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದಟತನ ತೋರುತ್ತಿದ್ದಾರೆಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಸೇರಿದಂತೆ ಎಲ್ಲಾ ಗೌರವಾನ್ವಿತರು ಆರ್‍ಎಸ್‍ಎಸ್ ಹಿನ್ನೆಲೆಯಿಂದಲೇ ಬಂದಿದ್ದಾರೆ. ಆರ್‍ಎಸ್‍ಎಸ್ ವಿಶ್ವದಲ್ಲಿಯೇ ಬೃಹತ್ ಸಂಘಟನೆ ಎಂದು ಗುರುತಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಘಟನೆಯನ್ನು ಉಗ್ರವಾದಿಗಳಿಗೆ ಹೋಲಿಸಿರುವುದು ತೀರಾ ಖಂಡನೀಯ. ತಮ್ಮ ಹೇಳಿಕೆಯನ್ನು ತಿದ್ದಿಕೊಳ್ಳುವ ಬದಲು ಅದನ್ನು ಸಮರ್ಥಿಸಿಕೊಂಡಿರುವುದು ಅವರ ಮೂರ್ಖತನವನ್ನು ತೋರುತ್ತದೆ. ಈ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಕೂಡಾ ಸಮರ್ಥಿಸಿಕೊಂಡಿರುವುದು ಖಂಡನೀಯ. ಮುಂಬರುವ ಚುನಾವಣೆಯಲ್ಲಿ ಜನತೆ ಈ ಹೇಳಿಕೆಗೆ ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ಈವರೆಗೆ ಹತ್ತೊಂಬತ್ತು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ನೈಜ ಆರೋಪಿಗಳ ಬಂಧನವಾಗದೆ ತನಿಖೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಳ್ಳ ಹಿಡಿಯುವಂತೆ ಮಾಡಿದೆ. ಆರ್‍ಎಸ್‍ಎಸ್‍ನಂತಹ ಸಂಘಟನೆಯ ವಿರುದ್ಧ ಆರೋಪ ಮಾಡುವ ನೈತಿಕತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ. ಮುಂದಿನ ದಿನಗಳಲ್ಲಿ ಹಿಂದೂಪರ ಸರ್ಕಾರ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಹತ್ಯೆಯಾದ ಕಾರ್ಯಕರ್ತರಿಗೆ ನ್ಯಾಯ ದೊರೆಯಲಿದೆ ಎಂದು ತಿಳಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್  ಪ್ರಮುಖರಾದ ಬೆಲ್ಲು ಸೋಮಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ಬಾಲಚಂದ್ರ ಕಳಗಿ, ಸುವಿನ್ ಗಣಪತಿ, ಶಜಿಲ್ ಕೃಷ್ಣ, ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸತೀಶ್‍ಕುಮಾರ್, ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರು, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚೆಂಗಪ್ಪ, ಪದಾಧಿಕಾರಿಗಳು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News