ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕರ್ತವ್ಯ: ಎಂ.ಕೆ.ಶ್ರೀರಂಗಯ್ಯ

Update: 2018-01-12 16:41 GMT

ಚಿಕ್ಕಮಗಳೂರು, ಜ.12: ಪ್ರತಿಯೊಬ್ಬ ಅರ್ಹ ನಾಗರೀಕರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕೆಂದು ಬೂತ್ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಅವರು ಶುಕ್ರವಾರ ನಗರದ ಮಲೆನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ದತೆಗಾಗಿ ಮತದಾರರ ಪಟ್ಟಿ ಶುದ್ಧೀಕರಿಸುವ ಸಂಬಂಧ ತಾಲ್ಲೂಕು ಮಟ್ಟದ ಬಿಎಲ್‍ಓ ಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಚುನಾವಣೆ ಆಯೋಗದ  ನಿರ್ದೇಶನದಂತೆ  ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿಯನ್ನು ಶುದ್ಧೀಕರಿಸಬೇಕಾಗಿದ್ದು, ನೈಜ್ಯ, ಅರ್ಹ ಮತದಾರರ ಪಟ್ಟಿಯನ್ನು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಪರಿಷ್ಕರಿಸಿ ಮತದಾರರ ಪಟ್ಟಿಯನ್ನು ತಯಾರಿಸಬೇಕೆಂದರು.

ನೈಜ್ಯ ಮತದಾರರ ಪಟ್ಟಿಯನ್ನು ತಯಾರಿಸುವುದರಿಂದ ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಾಗುವುದಲ್ಲದೆ, ಪ್ರತಿಯೊಬ್ಬ ಮತದಾರರಿಗೂ ಮತದಾನ ಮಾಡಲು ಅನುಕೂಲವಾಗುತ್ತದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಯಾಗಿದ್ದು, ಬೇರೆ ಊರುಗಳಿಗೆ ಹೋದವರು ಹಾಗೂ ಮರಣ ಹೊಂದಿದವರ ಹೆಸರುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವರನ್ನು ನಿಯಮಾನುಸಾರವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು. ವಿಕಲಚೇತನರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯವಿರುವ ಸೌಲಭ್ಯಗಳನ್ನು ನೀಡಲು ಪ್ರತ್ಯೇಕ ಪಟ್ಟಿಯನ್ನು ತಯಾರಿಸಬೇಕೆಂದು ತಿಳಿಸಿದರು.

ಬಿಎಲ್‍ಓ ಗಳು ತಮ್ಮ ಮತದಾನ ಕೇಂದ್ರದಲ್ಲಿ ರ್ಯಾಂಪ್, ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳು ಹೊಂದಿವೆ ಎಂಬುದರ ಬಗ್ಗೆ ದೃಢಪಡಿಸಿಕೊಳ್ಳಬೇಕು. ಸುಲಲಿತ ಹಾಗೂ ಯಶಸ್ವಿ ಚುನಾವಣಾ ಕಾರ್ಯ ನಿರ್ವಹಣೆಗೆ ಎಲ್ಲರು ಶ್ರಮಿಸಬೇಕು ತಪ್ಪಿದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಹೆಚ್.ಅಮರೇಶ್, ತರಬೇತಿ ಉಪವಿಭಾಗಾಧಿಕಾರಿ ಡಾ .ಸಾಧನಾ, ತಹಸೀಲ್ದಾರ್‍ಗಳಾದ ಶಿವಣ್ಣ, ಮಹೇಶ್ವರಪ್ಪ ಹಾಗೂ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News