ಕಾಂಗ್ರೆಸ್ ಕಚೇರಿಗೆ ಮುತ್ತಿಗೆ: ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ಬಂಧನ, ಬಿಡುಗಡೆ

Update: 2018-01-12 17:41 GMT

ತುಮಕೂರು,ಜ.12: ಆರ್.ಎಸ್.ಎಸ್, ಬಿಜೆಪಿಯವರು ಉಗ್ರವಾದಿಗಳು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ, ಬಿಜೆಪಿ ಕರೆ ನೀಡಿದ್ದ ಜೈಲ್ ಭರೋ ಚಳುವಳಿಯ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಘೋಷಣೆ ಕೂಗಿ,ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಜೋತಿ ಗಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ದೇಶದಾದ್ಯಂತ ನೆಲಕಚ್ಚುತ್ತಿರುವ ಕಾಂಗ್ರೆಸ್‍ಗೆ ಕರ್ನಾಟಕದಲ್ಲಿಯೂ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ದೇಶದ್ರೋಹಿ ಹೇಳಿಕೆ ನೀಡುವ ಒವೈಸಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ  ಎಂದು ಆರೋಪಿಸಿದರು.

ವೋಟ್‍ಬ್ಯಾಂಕ್ ರಾಜಕಾರಣ ಮತ್ತು ಕುರ್ಚಿಯ ಆಸೆಯಿಂದಾಗಿ ಮುಖ್ಯಮಂತ್ರಿ, ಹಿಂದೂಗಳ ಹತ್ಯೆ ಮಾಡುತ್ತಿರುವ ಪಿಎಫ್‍ಐ ಮತ್ತು ಎಸ್‍ಡಿಪಿಐಗೆ ಬೆಂಬಲ ನೀಡುತ್ತಿದ್ದಾರೆ. ಈ ಸಂಘಟನೆಗಳ ಜತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ಉಗ್ರಗಾಮಿ ಸಂಘಟನೆಗಳು ಎನ್ನುವ ಹೇಳಿಕೆ ನೀಡುತ್ತಾ, ದೇಶವನ್ನೇ ಬಲಿಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಮತ್ತು ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‍ಗೆ ದೇಶದ ಜನರೇ ಬುದ್ಧಿ ಕಲಿಸುತ್ತಿದ್ದಾರೆ. ಹೀಗಾಗಿಯೇ ಲೋಕಸಭೆಯ 545 ಕ್ಷೇತ್ರಗಳಲ್ಲಿ ಕೇವಲ 46 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸಂಸದರಿದ್ದಾರೆ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಇದಕ್ಕಿಂತಲೂ ಕಾಂಗ್ರೆಸ್ ಪ್ರಪಾತಕ್ಕೆ ಇಳಿಯಲಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್ ಮಾತನಾಡಿ, ಕಾಂಗ್ರೆಸ್ ಸರಕಾರಕ್ಕೆ ಭಯೋತ್ಪಾದಕರನ್ನು, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವವರನ್ನು ಬಂಧಿಸಲು ತಾಕತ್ತಿಲ್ಲ. ಹೀಗಾಗಿ ದೇಶಭಕ್ತ, ಹಿಂದೂಪರ ಸಂಘಟನೆಗಳನ್ನು ಉಗ್ರಗಾಮಿಗಳು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.

ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದು,ಬಂಧಿಸಿದರು. ನೂರಾರು ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ನೂಕುನುಗ್ಗಲು ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಲ್ಲಿ ಜಮಾಯಿಸಿದ್ದರು. ಇದರಿಂದ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.

ಇದನ್ನು ಮನಗಂಡು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ನಾಗರಾಜ್ ಅವರು ಕಾಂಗ್ರೆಸ್ ಕಚೇರಿ ಆವರಣದ ಮುಂದೆ ಬ್ಯಾರಿಕೇಡ್‍ಗಳನ್ನು ಇಟ್ಟು ಕಾಂಗ್ರೆಸ್ ಕಾರ್ಯಕರ್ತರು ಬರದಂತೆ ತಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News