ವೇಷ ಹಾಕಿ ಕಳವು: ವ್ಯಕ್ತಿಯ ಬಂಧನ

Update: 2018-01-12 17:46 GMT

ಬೆಂಗಳೂರು, ಜ.12: ವಿವಿಧ ವೇಷಗಳನ್ನು ಹಾಕಿಕೊಂಡು ಕಳವು ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 24 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ತುಮಕೂರಿನ ಹೊಸ ಮಂಡಿಪೇಟೆ ನಿವಾಸಿ ಸೈಯದ್ ಅಹಮದ್ (32) ಬಂಧಿತ ಆರೋಪಿಯಾಗಿದ್ದು, 800 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಬಂಧನದಿಂದ ದಕ್ಷಿಣ ಭಾಗದ ಬಸವನಗುಡಿ, ಜಯನಗರ, ಜೆಪಿ ನಗರ ವ್ಯಾಪ್ತಿಯಲ್ಲಿ ನಡೆಸಿದ್ದಂತಹ 4 ಕಳ್ಳತನ ಪ್ರಕರಣವನ್ನು ಭೇದಿಸಿ 686 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅದೇ ರೀತಿ, ಪಶ್ಚಿಮ ಭಾಗದ ಬ್ಯಾಟರಾಯನಪುರ, ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರಕರಣಗಳನ್ನು 114 ಗ್ರಾಂ ಚಿನ್ನಾಭರಣ ಹಾಗೂ ಕತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಈ ಹಿಂದೆ ಕಳವು ಪ್ರಕರಣಗಳಲ್ಲಿ ಗಿರಿನಗರ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತನಾಗಿ ಶಿಕ್ಷೆಗೊಳಗಾಗಿದ್ದು, ಶಿಕ್ಷೆ ಮುಗಿಸಿ ಹೊರ ಬಂದ ನಂತರವೂ ಹಳೇ ಚಾಳಿಯನ್ನು ಮುಂದುವರೆಸಿದ್ದ ಎನ್ನಲಾಗಿದೆ.

ಸೇಲ್ಸ್ ಮೆನ್ ವೇಷದಲ್ಲಿ ಕಳ್ಳತನ: ಆರೋಪಿ ಹಗಲು ವೇಳೆ ಬೈಕ್‌ನಲ್ಲಿ ಸೇಲ್ಸ್‌ಮೆನ್ ರೀತಿ ಮನೆಗಳಿಗೆ ಹೋಗಿ ಕಾಲಿಂಗ್ ಬೆಲ್ ಮಾಡುತ್ತಾನೆ. ಯಾರೂ ಮನೆಯಿಂದ ಹೊರಗೆ ಬಾರದಿದ್ದಾಗ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮುಂಭಾಗದ ಬಾಗಿಲನ್ನು ಕಬ್ಬಿಣದ ರಾಡಿನಿಂದ ಹೊಡೆದು ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈತನ ವಿರುದ್ಧ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿದ್ದು, ಆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡದ ಉತ್ತಮ ಕಾರ್ಯವನ್ನು ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಮತ್ತು ನಗರ ಪೊಲೀಸ್ ಆಯುಕ್ತ ಟಿ.ಎಸ್.ಸುನಿಲ್ ಕುಮಾರ್ ಅವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News