ಸಂಪುಟ ಸಚಿವರೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಂತೆ ಮಾತನಾಡಬೇಕು:ಯಶವಂತ್ ಸಿನ್ಹಾ

Update: 2018-01-13 14:37 GMT

ಹೊಸದಿಲ್ಲಿ,ಜ.13: ಸರಕಾರದ ವಿರುದ್ಧ ಶನಿವಾರ ಮತ್ತೊಮ್ಮೆ ದಾಳಿ ನಡೆಸಿದ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರಂತೆ ಭೀತಿಯಿಂದ ಹೊರಬರುವಂತೆ ಮತ್ತು ಪ್ರಜಾಪ್ರಭುತ್ವಕ್ಕಾಗಿ ಧ್ವನಿಯೆತ್ತುವಂತೆ ತನ್ನ ಪಕ್ಷದ ಸಹೋದ್ಯೋಗಿಗಳು ಮತ್ತು ನಾಯಕರಿಗೆ ಕಿವಿಮಾತು ಹೇಳಿದರು. ನಾಲ್ವರು ನ್ಯಾಯಾಧೀಶರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು, ಇಂದಿನ ವಾತಾವರಣ 1975-77ರ ತುರ್ತು ಸ್ಥಿತಿಯಂತಿದೆ ಎಂದು ಪ್ರತಿಪಾದಿಸಿದರು. ಸಂಸತ್ ಅಧಿವೇಶನಗ ಳನ್ನು ಮೊಟಕುಗೊಳಿಸುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಬಗ್ಗೆ ರಾಜಿ ಮಾಡಿಕೊಂಡರೆ ಮತ್ತು ಸರ್ವೋಚ್ಚ ನ್ಯಾಯಾಲಯವು ಸುವ್ಯವಸ್ಥಿತವಿಲ್ಲದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದರು.

ಪ್ರಜಾಪ್ರಭುತ್ವಕ್ಕೆ ಬೆದರಿಕೆಯಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಹೇಳಿದ್ದರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದ ಅವರು, ಪ್ರಜಾಪ್ರಭುತ್ವದ ಪರವಾಗಿರುವ ಪ್ರತಿಯೊಬ್ಬ ಪ್ರಜೆಯೂ ಮಾತನಾಡಬೇಕು. ಭಯವನ್ನು ಬಿಡುವಂತೆ ಮತ್ತು ಮಾತನಾಡುವಂತೆ ನಾನು ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರನ್ನು ಕೇಳಿಕೊಳ್ಳುತ್ತೇನೆ ಎಂದರು.

ಆದರೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಾಲ್ವರು ನ್ಯಾಯಾಧೀಶರು ಬಂಡೆದ್ದಿರುವ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವುದು ಸರ್ವೋಚ್ಚ ನ್ಯಾಯಾಲಯಕ್ಕೆ ಬಿಟ್ಟ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು.

 ಮುಖ್ಯ ನ್ಯಾಯಮೂರ್ತಿಗಳಂತೆ ಪ್ರಧಾನ ಮಂತ್ರಿಗಳು ಸಹ ಸರಕಾರದಲ್ಲಿಯ ಸಮಾನರಲ್ಲಿ ಮೊದಲಿಗರಾಗಿದ್ದಾರೆ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಧ್ವನಿಯೆತ್ತಬೇಕಾಗಿದೆ ಎಂದ ಸಿನ್ಹಾ, ಈ ಸರಕಾರದಲ್ಲಿ ಸಂಪುಟದ ಸದಸ್ಯರು ಭೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತನಗೆ ಗೊತ್ತಿದೆ ಮತ್ತು ಇದು ಸಹ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದರು.

 ನ್ಯಾಯಾಂಗದ ಬಿಕ್ಕಟ್ಟಿನಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶಿಸಬಾರದು ಎನ್ನುವ ಅಭಿಪ್ರಾಯಗಳನ್ನು ತಿರಸ್ಕರಿಸಿದ ಅವರು, ಹಿರಿಯ ನ್ಯಾಯಾಧೀಶರು ಸಾರ್ವಜನಿಕವಾಗಿ ಅಸಮಾಧಾನ ತೋಡಿಕೊಂಡಿರುವುದು ಈಗ ನ್ಯಾಯಾಲಯದ ಆಂತರಿಕ ವಿಷಯ ವಾಗುಳಿದಿಲ್ಲ ಮತ್ತು ಕಳಕಳಿಯುಳ್ಳ ಪ್ರತಿಯೊಬ್ಬ ಪ್ರಜೆಯೂ ತನ್ನ ಧ್ವನಿಯನ್ನೆತ್ತ ಲೇಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಈ ನ್ಯಾಯಾಧೀಶರು ಹೇಳಿರುವಾಗ ರಾಜಕೀಯ ಪಕ್ಷಗಳು ಮತ್ತು ಸಂಸತ್ತು ಮಾತನಾಡಲೇಬೇಕು ಎಂದರು.

  ಚಳಿಗಾಲದ ಅಧಿವೇಶನ ಮತ್ತು ಜ.29ರಿಂದ ಫೆ.29ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ಮೊದಲ ಹಂತವನ್ನು ಪ್ರಸ್ತಾಪಿಸಿದ ಸಿನ್ಹಾ, ಇಂತಹ ಸಂಕ್ಷಿಪ್ತ ಅಧಿವೇಶನಗಳ ಬಗ್ಗೆ ತಾನೆಂದೂ ಕೇಳಿಲ್ಲ ಮತ್ತು ಇದು ಸಹ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದರು.

ಮುಖ್ಯ ನ್ಯಾಯಮೂರ್ತಿಗಳು ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಿಗೆ ನೀಡುತ್ತಿದ್ದಾರೆ ಎಂಬ ನಾಲ್ವರು ನ್ಯಾಯಾಧೀಶರ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಈ ಪ್ರಕರಣಗಳು ಯಾವುದು ಎನ್ನುವದು ಸ್ಪಷ್ಟವಾಗಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News